ಮುಸ್ಲಿಮರ ಮುನಿಸಿಗೆ “ಹಿಜಾಬ್” ಮುಲಾಮು!? ಆರ್.ಅಶೋಕ್ ಟೀಕೆ

ಬೆಂಗಳೂರು,ಮೇ,14,2026 (www.justkannada.in): ಶಾಲಾ ಸಮವಸ್ತ್ರ ಕುರಿತು 2022ರ ಆದೇಶ ಹಿಂಪಡೆದು ಶಾಲಾಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿ ಕೇಸರಿ ಶಾಲಿಗೆ ಅವಕಾಶ ನಿರಾಕರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಕೆಂಡಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ದಾವಣಗೆರೆ ಉಪಚುನಾವಣೆ ಸುತ್ತ ನಡೆದ ಘಟನೆಗಳ ನಂತರ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಬೆದರಿರುವ ಕಾಂಗ್ರೆಸ್ ಸರ್ಕಾರ, ಈಗ ತನ್ನ ಮತಬ್ಯಾಂಕ್ ಉಳಿಸಿಕೊಳ್ಳಲು ‘ಹಿಜಾಬ್’ ಅಸ್ತ್ರವನ್ನು ಕೈಗೆತ್ತಿಕೊಂಡಿದೆ.

ರಾಜ್ಯದ ನೈಜ ಸಮಸ್ಯೆಗಳಾದ ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಂಕಷ್ಟ, ಕಾನೂನು ಸುವ್ಯವಸ್ಥೆಯ ವೈಫಲ್ಯ – ಇವೆಲ್ಲದರ ಬಗ್ಗೆ ಮೌನವಾಗಿರುವ ಕಾಂಗ್ರೆಸ್ ಸರ್ಕಾರ, ಮುನಿಸಿಕೊಂಡಿರುವ ಮುಸ್ಲಿಂ ಮತ ಬ್ಯಾಂಕ್ ಗೆ “ಹಿಜಾಬ್” ಮೂಲಕ ಮುಲಾಮು ಹಚ್ಚಲು ಹೊರಟಿದೆ ಎಂದು ಲೇವಡಿ ಮಾಡಿದ್ದಾರೆ.

ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆ ಯಾವ ಸೀಮೆ ಜಾತ್ಯತೀತತೆ?..

ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಮಾನ್ಯ ಹೈಕೋರ್ಟ್ ಎತ್ತಿ ಹಿಡಿದಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮುಖ್ಯ ಎಂದು ತೀರ್ಪು ನೀಡಿತ್ತು. ಈಗ ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ಯಾವ ಸೀಮೆ ಜಾತ್ಯತೀತತೆ? ಎಂದು ಕಾಂಗ್ರೆಸ್ ಸರ್ಕಾರಕ್ಕೆ ಆರ್.ಅಶೋಕ್ ಚಾಟಿ ಬೀಸಿದ್ದಾರೆ.

ಒಂದು ಸಮುದಾಯದ ಹಿಜಾಬ್‌ ಗೆ ಹಸಿರು ನಿಶಾನೆ ತೋರಿರುವ ಸಿದ್ದರಾಮಯ್ಯ ಸರ್ಕಾರ, ಕೇಸರಿ ಶಾಲುವಿಗೆ ಮಾತ್ರ ನಿಷೇಧ ಹೇರಿದೆ. ನಿಮ್ಮ ಈ ಓಲೈಕೆ ರಾಜಕಾರಣ ಹಿಂದೂಗಳಿಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ ಮುಖ್ಯಮಂತ್ರಿಗಳೇ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಆರ್.ಅಶೋಕ್ ಕಿಡಿಕಾರಿದ್ದಾರೆ.

ಶಾಲಾ-ಕಾಲೇಜುಗಳನ್ನು ಸಮಾನತೆಯ ಕೇಂದ್ರಗಳನ್ನಾಗಿ ನೋಡುವ ಬದಲು, ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ವಿಭಜಿಸುತ್ತಿರುವ ನಿಮ್ಮ ನಡೆಯೇ ನಾಚಿಕೆಗೇಡು.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅತಿಯಾದ ಓಲೈಕೆ ರಾಜಕಾರಣ ಮಾಡಿ ಯಾವ ದುಸ್ಥಿತಿಗೆ ತಲುಪಿದೆಯೋ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೂ ಅದೇ ಗತಿ ಕಾದಿದೆ. ಕರ್ನಾಟಕದಲ್ಲಿ ತುಷ್ಟೀಕರಣದ ಪರಾಕಾಷ್ಠೆ ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ.

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನ ಮತ್ತು ನ್ಯಾಯಾಂಗದ ಆಶಯಗಳನ್ನು ಬಲಿಕೊಡುತ್ತಿರುವ ಈ ಸರ್ಕಾರಕ್ಕೆ ಜನರೇ ಅಂತ್ಯ ಹಾಡಲಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

Key words: School, hijab, Congress, Muslim, R. Ashok