Wednesday, September 30, 2026

BDA Apartments

ನೀಟ್ ಪರೀಕ್ಷೆ ರದ್ದು: ಆಡಳಿತಾತ್ಮಕ ವೈಪಲ್ಯ, ಯುವಜನತೆಗೆ ಬಗೆದ ಕ್ರೂರ ದ್ರೋಹ- ...
Home Front Page ನೀಟ್ ಪರೀಕ್ಷೆ ರದ್ದು: ಆಡಳಿತಾತ್ಮಕ ವೈಪಲ್ಯ, ಯುವಜನತೆಗೆ ಬಗೆದ ಕ್ರೂರ ದ್ರೋಹ- ಸಿಎಂ ಸಿದ್ದರಾಮಯ್ಯ

ನೀಟ್ ಪರೀಕ್ಷೆ ರದ್ದು: ಆಡಳಿತಾತ್ಮಕ ವೈಪಲ್ಯ, ಯುವಜನತೆಗೆ ಬಗೆದ ಕ್ರೂರ ದ್ರೋಹ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮೇ,14,2026 (www.justkannada.in): ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ‘ನೀಟ್-ಯುಜಿ 2026’ ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ, ದೇಶದ ಯುವಜನತೆಗೆ ಬಗೆದ ಕ್ರೂರ ದ್ರೋಹವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ ಪರೀಕ್ಷೆ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ದೇಶದ 22 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ಈ ಪರೀಕ್ಷೆ ಬರೆದಿದ್ದರು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ, ಪ್ರಯಾಣ ಸೇರಿದಂತೆ ಸಾಕಷ್ಟು ಖರ್ಚುಗಳನ್ನು ಮಾಡಿದ್ದರು. ಆದರೆ ಕೇಂದ್ರದ ಒಂದು ನಿರ್ಧಾರ ಇಡೀ ವಿದ್ಯಾರ್ಥಿ ಸಮುದಾಯವನ್ನು ಅನಿಶ್ಚಿತತೆ ಮತ್ತು ಸಂಕಷ್ಟಕ್ಕೆ ತಳ್ಳಿದೆ.

2024ರಲ್ಲೇ ನಮ್ಮ ಸರ್ಕಾರವು ನೀಟ್ ಪರೀಕ್ಷೆಯು ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತದೆ. ಶಾಲಾ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ದಾಖಲಾತಿ ವಿಚಾರದಲ್ಲಿ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಸದನ ನಿರ್ಣಯ ಕೈಗೊಂಡಿದ್ದೆವು. ಅಂದಿನ ನಮ್ಮ ಕಾಳಜಿ ಎಷ್ಟು ಸತ್ಯ ಮತ್ತು ಅನಿವಾರ್ಯವಾಗಿತ್ತು ಎನ್ನುವುದನ್ನು ಇಂದಿನ ಪರೀಕ್ಷಾ ರದ್ದತಿಯು ಸಾಬೀತುಪಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

 ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

ನೇಮಕಾತಿ ಪರೀಕ್ಷೆಗಳಿಂದ ಹಿಡಿದು ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳವರೆಗೆ ಪೇಪರ್ ಲೀಕ್ ಪ್ರಕರಣಗಳು ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ರಕ್ಷಣೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ಹೊಣೆ ಹೊರಬೇಕಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಯುವಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.ನೀಟ್ ಪರೀಕ್ಷೆ ರದ್ದು NEET

ಈ ಬಗ್ಗೆ ಪಾರದರ್ಶಕ, ಕಾಲಮಿತಿಯ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಹೊಸ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು ಮತ್ತು ಅಂತಹ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಜ್ಯಗಳ ಅಧಿಕಾರವನ್ನು ಪುನಃಸ್ಥಾಪಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.ಆಡಳಿತಾತ್ಮಕ ವೈಪಲ್ಯ jk02_new jk02 new

ಪೇಪರ್ ಲೀಕ್‌ ನಿಂದ ತೊಂದರೆಗೀಡಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪೋಷಕರ ಜೊತೆ ನಾವಿದ್ದೇವೆ. ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗುವಂತೆ ಮಾಡುವುದು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Key words: Cancellation, NEET exam,  CM, Siddaramaiah