Thursday, July 30, 2026

BDA Apartments

Home Front Page ಸಚಿವರ ಸಭೆ: ಮೂರು ನಗರಗಳಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆಗೆ ತೀರ್ಮಾನ

ಸಚಿವರ ಸಭೆ: ಮೂರು ನಗರಗಳಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆಗೆ ತೀರ್ಮಾನ

ಬೆಂಗಳೂರು,ಏಪ್ರಿಲ್,30,2026 (www.justkannada.in):  ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ  ಡೇಟಾ ಕೇಂದ್ರಗಳು (ಸಸ್ಟೇನಬಲ್ ಡೇಟಾ ಸೆಂಟರ್ಸ್) ಅಗತ್ಯವಿದ್ದು ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಡೇಟಾ ಪಾರ್ಕ್ ಸ್ಥಾಪಿಸಲು ಗುರುವಾರ ನಡೆದ ಸಂಬಂಧಿತ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇಲ್ಲಿನ ಶಕ್ತಿ ಭವನದಲ್ಲಿ ನಡೆದ ಈ ಪ್ರಾಥಮಿಕ ಸಭೆಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್, ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ಹೊಸಕೋಟೆಯ ಸಮೀಪ 500 ಮೆಗಾವ್ಯಾಟ್ ಸಾಮರ್ಥ್ಯದ ಸುಸ್ಥಿರ ಡೇಟಾ ಕೇಂದ್ರ ಪಾರ್ಕ್ ಸ್ಥಾಪಿಸಲಾಗುವುದು. ಪಾವಗಡದಿಂದ ಪೂರೈಕೆಯಾಗುವ ಸೌರ ವಿದ್ಯುತ್ ನೇರವಾಗಿ ಇಲ್ಲಿಗೆ ತಲುಪುತ್ತದೆ. ಜತೆಗೆ ಬೆಂಗಳೂರು ಜಲ‌ ಮಂಡಳಿಯು ಎರಡು ಹಂತಗಳಲ್ಲಿ ಸಂಸ್ಕರಿಸಿದ 60 ಎಂ.ಎಲ್.ಡಿ ನೀರು ಪೂರೈಕೆಗೆ ತೊಂದರೆ ಇಲ್ಲ ಎಂದು ತಿಳಿಸಿದೆ. ಸ್ವತಃ ಉದ್ಯಮಗಳೇ ಈ‌ ನೀರಿನ ಮೂರನೇ ಹಂತದ ಶುದ್ಧೀಕರಣ ಮಾಡಿಕೊಳ್ಳುತ್ತವೆ. ಈ ಮೂರೂ ಪಾರ್ಕುಗಳ ಒಟ್ಟು ಸಾಮರ್ಥ್ಯ 1,000 ಮೆಗಾವ್ಯಾಟ್ ಇರಲಿದೆ ಎಂದು ಸಚಿವರು ಹೇಳಿದ್ದಾರೆ.

ಮಂಗಳೂರಿನಲ್ಲಿ ಕೂಡ ಡೇಟಾ ಪಾರ್ಕ್ ಸ್ಥಾಪನೆಗೆ ಭೂಮಿಯು ಲಭ್ಯವಿದೆ. ಅಲ್ಲಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಗೆ ಸೇರಿದ 350 ಎಕರೆ ಇದೆ. ಮೈಸೂರಿನಲ್ಲಿ ಈ ಉದ್ದೇಶಕ್ಕೆ ಸೂಕ್ತ ಜಾಗ ಗುರುತಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಈ ಪಾರ್ಕ್ ಗಳಲ್ಲಿ ಯಾರೇ ಬಂದ ಡಾಟಾ ಸೆಂಟರ್ ಸ್ಥಾಪನೆಗೆ ಹೂಡಿಕೆ ಮಾಡಿದರೆ ಅವರಿಗೆ ವಿದ್ಯುತ್ ಮತ್ತು ನೀರು ನೀಡಲಾಗುವುದು. ಇದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳಲು ಮೂವರು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸದ್ಯದಲ್ಲೇ ಹೂಡಿಕೆದಾರರ ಜತೆಗೂ ಸಭೆ ಮಾಡಲು ಸಚಿವರು ಸಲಹೆ ನೀಡಿದರು.

ಮುಂದಿನ ಹಂತದಲ್ಲಿ ಜಲ ಸಂಪನ್ಮೂಲ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಇರುವ ಸಚಿವರ ತಂಡವನ್ನೂ ಮತ್ತು ಉನ್ನತ ಅಧಿಕಾರಿಗಳ ತಂಡವನ್ನೂ ಈ ಸಂಬಂಧ ರಚಿಸಲಾಗುವುದು. ಒಟ್ಟಿನಲ್ಲಿ ತ್ವರಿತವಾಗಿ ಈ ಡೇಟಾ ಪಾರ್ಕುಗಳನ್ನು ಸ್ಥಾಪಿಸಲಾಗುವುದು ಎಂದು ಅವರು ನುಡಿದಿದ್ದಾರೆ.

ಸಭೆಯಲ್ಲಿ ಇಂಧನ ಮತ್ತು ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ, ಕೆಎಸ್ಐಐಡಿಸಿ ವ್ಯವಸ್ಥಾಪಕ‌ ನಿರ್ದೇಶಕಿ ಖುಷ್ಬು ಗೋಯಲ್, ಕೆಐಎಡಿಬಿ ಆಯುಕ್ತ ಡಾ.ಮಹೇಶ್, ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷ ರಾಮಮನೋಹರ್ ಪ್ರಸಾದ್, ಐಟಿ ನಿರ್ದೇಶಕ ರಾಹುಲ್ ಸಂಕನೂರು ಭಾಗವಹಿಸಿದ್ದರು.

Key words: Ministers, meeting, establish, sustainable, data parks