ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ: ಬಜೆಟ್ ನಲ್ಲಿ ಆರೋಗ್ಯ ಇಲಾಖೆಗೆ ಸಿಕ್ಕಿದ್ದೇನು?

ಬೆಂಗಳೂರು,ಮಾರ್ಚ್,6,2026 (www.justkannada.in): ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಮಾಡಲಾಗಿದ್ದು ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಘೋಷಣೆ ಮಾಡಿದ್ದಾರೆ .

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದಾರೆ

ಬಜೆಟ್ ​​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ  ಸಿಕ್ಕಿದ್ದೇನು?

ಆರೋಗ್ಯ ಇಲಾಖೆ ಮೂಲ ಸೌಕರ್ಯ ಅಭಿವೃದ್ಧಿಗೆ 900 ಕೋಟಿ ರೂ. ಮೀಸಲಿಡಲಾಗುವುದು, ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಟ್ರಾಮಾ ಕೇರ್ ಸೆಂಟರ್ ತೆರೆಯಲಾಗುವುದು. ಐಸಿಯುಗಳಿಗೆ ಉಪಕರಣ ಮೇಲ್ದರ್ಜೆಗೇರಿಸಲು 45 ಕೋಟಿ ರೂಪಾಯಿ ಮೀಸಲಿಡಲಾಗುವುದು. ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಪೌಷ್ಟಿಕ ಪುನಶ್ಚೇತನ ಕೇಂದ್ರ ತೆರೆಯಲಾಗುವುದು. 18 ವರ್ಷದವರೆಗಿನ ಮಧುಮೇಹ ರೋಗಿಗಳಿಗೆ ಉಚಿತ ಇನ್ಸುಲಿನ್ ಪೆನ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಾರಣಾಂತಿಕ ಕಾಯಿಲೆ ರೋಗಿಗಳಿಗೆ ಕೇರಳ ಮಾದರಿ ಗೃಹಾಧಾರಿತ ಆರೈಕೆ ಒದಗಿಸಲಾಗುವುದು. ಇಸ್ಕಾನ್ ಮೂಲಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರ ಪೂರೈಕೆ ಮಾಡಲಾಗುವುದು. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಶೀಘ್ರ ಭರ್ತಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾರವಾರ, ಯಾದಗಿರಿಯಲ್ಲಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ತಲಾ 100 ಕೋಟಿ ರೂ. ವೆಚ್ಚದ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಮುನಿರಾಬಾದ್-ಟಿ.ಬಿ ಡ್ಯಾಂ ಬಳಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ ಸ್ಥಾಪನೆ ಬಗ್ಗೆ ಘೋಷಣೆ

ಬೆಂಗಳೂರಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ ಸ್ಥಾಪನೆ ಮಾಡುವುದಾಗಿ ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್‌, ಕೊಪ್ಪಳ ಚಿತ್ರದುರ್ಗ, ಮಂಡ್ಯ, ಭದ್ರಾವತಿ, ಕೆಜಿಎಫ್‌ನಲ್ಲಿ ESI ಆಸ್ಪತ್ರೆ ಉನ್ನತೀಕರಣಗೊಳಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Key words: Health Department, budget, CM Siddaramaiah