ಮೈಸೂರು,ಮಾರ್ಚ್,4,2026 (www.justkannada.in): ಮೈಸೂರು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಗಂಭೀರವಾಗಿ ಗಾಯಗೊಂಡಿದ್ದ ಒಂದು ಹೆಣ್ಣು ಕುದುರೆಗೆ ಕೃತಕ ಕಾಲು ಜೋಡಣೆ ಮಾಡಲಾಗಿದ್ದು ಹೊಸ ಕಾಲಿನೊಂದಿಗೆ ಕುದುರೆಯು ನಿಧಾನವಾಗಿ ನಡೆಯಲು ಕಲಿಯುತ್ತಿದೆ.
ಹೌದು, ಎರಡು ತಿಂಗಳ ಹಿಂದೆ ಇಲವಾಲ ಹೋಬಳಿಯ ಸಾಹುಕಾರಹುಂಡಿ ಸಮೀಪ ನಾಲ್ಕು ವರ್ಷದ ಕುದುರೆಯ ಮುಂಗಾಲು ಗಂಭೀರವಾಗಿ ಗಾಯಗೊಂಡಿತ್ತು. ಈ ಮಾಹಿತಿ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಮೈಸೂರು ಸಂಸ್ಥೆಗೆ ಸಿಕ್ಕಿದ್ದು, ಸಂಸ್ಥೆ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಕುದುರೆಯ ಬಲ ಮುಂಗಾಲು ನಾಶವಾಗಿ, ಕೇವಲ ಚರ್ಮದ ಒಂದು ತುಂಡಿನಿಂದ ತೂಗುತ್ತಿತ್ತು. ತಕ್ಷಣವೇ ಅದನ್ನು ಪಿಎಫ್‌ಎ ಆಶ್ರಯಕ್ಕೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಯಿತು.
ಪಶುವೈದ್ಯರಾದ ಡಾ.ಅಮರ್ ದೀಪ್ ಸಿಂಗ್ ಹಾಗೂ ಡಾ.ಕಿರಣ್ ಪರಿಶೀಲಿಸಿ ಅಂಗಛೇದನ ಮಾಡುವುದೇ ಏಕೈಕ ಮಾರ್ಗ ಎಂದು ತಿಳಿಸಿದರು. ಬಳಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಆದರೆ, ನಿಜವಾದ ಸವಾಲು ಶಸ್ತ್ರಚಿಕಿತ್ಸೆಯ ನಂತರ ಆರಂಭವಾಯಿತು. ಮೂರು ಕಾಲುಗಳ ಮೇಲೆ ಸಮತೋಲನ ಕಾಯ್ದುಕೊಳ್ಳಲು ಕುದುರೆ ಸಂಕಷ್ಟಪಡುತ್ತಿತ್ತು. ಬಳಿಕ ಕುದುರೆಗೆ ಕೃತಕಕಾಲು ಹಾಕಲು ವೈದ್ಯ ತಂಡ ತೀರ್ಮಾನಿಸಿತು.
ಬೆಂಗಳೂರಿನ ಏರೋನಾಟಿಕಲ್ ಎಂಜಿನಿಯರ್ ಸುಪ್ರಿತ್ ಗೌಡ ಅವರು ತಮ್ಮ ತಂಡದೊಂದಿಗೆ (ಗೋಪಾಲನ್ ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜೆಂಟ್ ನ ವಿದ್ಯಾರ್ಥಿಗಳು) ಕಸ್ಟಮೈಸ್ಡ್ ಪೊಸ್ಥೆಟಿಕ್ ಲಿಂಬ್ ಅನ್ನು ಅಭಿವೃದ್ಧಿಪಡಿಸಿದರು. ಆರಂಭದಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಪರಿಗಣಿಸಲಾಯಿತು. ಆದರೆ, ಕುದುರೆಯ ಭಾರವನ್ನು ಹೊತ್ತುಕೊಳ್ಳುವ ಅಗತ್ಯತೆ ಮತ್ತು ದೀರ್ಘಕಾಲೀನ ಬಾಳಿಕೆಗಾಗಿ ಬೇರೆ ವಿನ್ಯಾಸ ಮತ್ತು ವಸ್ತುವನ್ನು ಆಯ್ಕೆ ಮಾಡಲಾಯಿತು. ಕೃತಕ ಕಾಲು ಹಗುರವಾಗಿ, ಸ್ಥಿರವಾಗಿ ಮತ್ತು ಪ್ರಾಣಿಗೆ ಆರಾಮದಾಯಕವಾಗಿರುವಂತೆ ಜೋಡಣೆ ಮಾಡಲಾಯಿತು.
“ಇದೀಗ ವೈದ್ಯ ತಂಡವು ಕುದುರೆಗೆ ಕೃತಕ ಕಾಲನ್ನುಯಶಸ್ವಿಯಾಗಿ ಅಳವಡಿಸಲಾಗಿದ್ದು, ತನ್ನ ಹೊಸ ಕಾಲಿನೊಂದಿಗೆ ಕುದುರೆಯು ನಿಧಾನವಾಗಿ ನಡೆಯಲು ಕಲಿಯುತ್ತಿದ್ದು, ಚಲನಶೀಲತೆಯ ಜತೆಗೆ ಸಮತೋಲನ ಮತ್ತು ಆತ್ಮವಿಶ್ವಾಸವನ್ನೂ ಮರಳಿ ಪಡೆಯುತ್ತಿದೆ,” ಎಂದು ಮೈಸೂರಿನ ಪಿಎಫ್ಎ ಮ್ಯಾನೇಜಿಂಗ್ ಟಸ್ಟಿ ಸವಿತಾ ನಾಗಭೂಷಣ್ ತಿಳಿಸಿದಾರೆ.
Key words: Mysore, Artificial leg, fitted, horse







