ಮೈಸೂರು,ಫೆಬ್ರವರಿ,3,2026 (www.justkannada.in): ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಮಾಡಿಸಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಜನರನ್ನು ಪರೋಕ್ಷವಾಗಿ ತಪ್ಪು ದಾರಿಗೆ ತಳ್ಳುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್ ಅವರು, “ಕಳೆದ ಎರಡು ತಿಂಗಳಿನಿಂದ ಇ-ಖಾತಾ ಮಾಡಿಸಿಕೊಳ್ಳಲು ಸಾಧ್ಯವಾಗದೆ ಜನರು ಪರದಾಡುವಂತಾಗಿದೆ. ಸ್ವತಃ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರಾಗಿದ್ದರೂ ಸಮಸ್ಯೆ ಬಗೆಹರಿಯದಿರುವುದು ದುರಂತ” ಎಂದು ಬೇಸರ ವ್ಯಕ್ತಪಡಿಸಿದರು.
ಇ-ಖಾತಾ ವ್ಯವಸ್ಥೆ ಸಂಪೂರ್ಣ ಗೊಂದಲಗೊಂಡಿದ್ದು, ಇದನ್ನು ಜಾರಿಗೆ ತರುವ ಮೊದಲು ಮನೆಮನೆಗೆ ತೆರಳಿ ಸಮಗ್ರ ಸರ್ವೇ ನಡೆಸಬೇಕಿತ್ತು. ಎಲ್ಲಾ ಆಸ್ತಿಗಳ ಡೇಟಾ ಸಂಗ್ರಹಣೆ ಬಳಿಕವೇ ಇ-ಖಾತಾ ಕಡ್ಡಾಯಗೊಳಿಸಬೇಕಾಗಿತ್ತು. ಆದರೆ ಯಾವುದೇ ಪೂರ್ವಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಇ-ಖಾತಾ ಜಾರಿಗೊಳಿಸಲಾಗಿದೆ ಎಂದು ಟೀಕಿಸಿದರು.
ಇ-ಖಾತಾ ಸಮಸ್ಯೆಯಿಂದಾಗಿ ಆಸ್ತಿ ಮಾರಾಟ-ಖರೀದಿ ಸ್ಥಗಿತಗೊಂಡಿದ್ದು, ಜನರು ಕೋರ್ಟ್‌ಗಳು ಹಾಗೂ ಸರ್ಕಾರಿ ಕಚೇರಿಗಳ ಸುತ್ತಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವೆಬ್‌ಸೈಟ್ ನಲ್ಲಿ ಸ್ಪಷ್ಟ ಮಾಹಿತಿ ಲಭ್ಯವಿಲ್ಲದ ಕಾರಣ ಜನರು ಮಧ್ಯವರ್ತಿಗಳ ಬಳಿ ಹೋಗಬೇಕಾದ ಸ್ಥಿತಿ ಉಂಟಾಗಿದ್ದು, ಅಲ್ಲಿ ಹಣ ಸುಲಿಗೆ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ ಎಂದು ಶಿವಕುಮಾರ್ ಹೇಳಿದರು.
“ಬೇರೆ ರಾಜ್ಯಗಳಲ್ಲಿ ಎಐ (AI) ತಂತ್ರಜ್ಞಾನ ಬಳಸಿ ಸುಗಮವಾಗಿ ಸೇವೆ ಒದಗಿಸಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ‘ಕಣಜ’ ಎಂಬ ಸಾಫ್ಟ್‌ವೇರ್ ಮೂಲಕ ಜನರಿಗೆ ಗೊಂದಲ ಸೃಷ್ಟಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಗೆ ವರ್ಷಕ್ಕೆ ಸುಮಾರು ₹200 ಕೋಟಿ ಕಂದಾಯ ವಸೂಲಿ ಆಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಜನರು ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ” ಎಂದು ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.
ಈ ಸಂಬಂಧ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡ ಶಿವಕುಮಾರ್ ಅವರು, ಇ-ಖಾತಾ ವಿಫಲತೆಯಿಂದ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಭಾರೀ ಆರ್ಥಿಕ ನಷ್ಟವಾಗುತ್ತಿದೆ. “ಐಟಿ-ಬಿಟಿ ಸಚಿವರಾಗಿದ್ದುಕೊಂಡು ಇ-ಖಾತಾ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗದವರು, ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಹೊಂದಿದ್ದಾರೆ?” ಎಂದು ಪ್ರಶ್ನಿಸಿದರು.
ಮೈಕ್ರೋಸಾಫ್ಟ್, ಗೂಗಲ್ ನಂತಹ ಪ್ರತಿಷ್ಠಿತ ಕಂಪನಿಗಳು ರಾಜ್ಯದಿಂದ ಹೊರ ಹೋಗಿರುವುದರಿಂದ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಳೆದುಹೋಗಿದೆ. ಇದಕ್ಕೆ ಐಟಿ-ಬಿಟಿ ಸಚಿವರ ವೈಫಲ್ಯವೇ ಪ್ರಮುಖ ಕಾರಣ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸರ್ಕಾರದ ವೈಫಲ್ಯದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಇ-ಖಾತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು. ಇ-ಖಾತಾ ಕಡ್ಡಾಯ ನಿಯಮವನ್ನು ಹಿಂಪಡೆಯಬೇಕು. ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಮಾಜಿ ಮೇಯರ್ ಶಿವಕುಮಾರ್ ಎಚ್ಚರಿಕೆ ನೀಡಿದರು.
Key words: E-khata, chaos, public, Mysore, Former Mayor, Shivakumar ,







