ಮೈಸೂರು,ಫೆಬ್ರವರಿ,2,2026 (www.justkannada.in): ತಾಲ್ಲೂಕಿನ ಕೇತಹಳ್ಳಿ ಗ್ರಾಮದ ಸರ್ವೇ ನಂ. 35/3 ರಲ್ಲಿರುವ 5 ಗುಂಟೆ ಜಾಗಕ್ಕೆ ಸಂಬಂಧಿಸಿದಂತೆ ರಾಜಮ್ಮ ಮತ್ತು ಅವರ ಮಗ ಮಹದೇವಸ್ವಾಮಿ ಅವರು ಅಕ್ರಮ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾಗಿವೆ ಎಂದು ಬಾಗಳಿ ಮಾದಪ್ಪನವರ ಮರಿ ಮೊಮ್ಮಗ ಆನಂದ್ ಹೇಳಿದರು.
ತಿ. ನರಸೀಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸದರಿ ಜಾಗವನ್ನು ತಮ್ಮ ಕುಟುಂಬ ನಾಲ್ಕು ತಲೆಮಾರಿನಿಂದ ನಿರಂತರವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದು, 2001ರಲ್ಲಿ ತಹಶೀಲ್ದಾರ್ ಆದೇಶ ಹಾಗೂ ಸಹಾಯಕ ಆಯುಕ್ತರ ನ್ಯಾಯಾಲಯದ ತೀರ್ಪಿನಂತೆ ಕಾನೂನುಬದ್ಧವಾಗಿ ಖಾತೆ ಮಾಡಿಸಿಕೊಂಡಿರುವುದಾಗಿ ತಿಳಿಸಿದರು.
ಈ ಸಂಬಂಧ ರಾಜಮ್ಮ ಅವರು ಸಲ್ಲಿಸಿದ್ದ ಮೇಲ್ಮನವಿ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿ ವಜಾಗೊಂಡಿದೆ, ಇದನ್ನೆಲ್ಲಾ ತಿಳಿದಿದ್ದರೂ ಸಹ ರಾಜಮ್ಮ ಹಾಗೂ ಅವರ ಪುತ್ರ ಮಹದೇವಸ್ವಾಮಿ ಅವರು ರೆವಿನ್ಯೂ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಲಂಚ ನೀಡಿ ರಾತ್ರೋ ರಾತ್ರಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಪತ್ರಕರ್ತರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.
ವಾಸ್ತವವಾಗಿ, 2024ರ ಜುಲೈ 18ರಂದು ಖಾತೆ ಸಂಬಂಧ ಅರ್ಜಿ ಸಲ್ಲಿಸಲಾಗಿದ್ದು, ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಗ್ರಾಮಸ್ಥರಿಂದ ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿಗಳು ಕಾನೂನುಬದ್ಧವಾಗಿ ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹೀಗಿರುವಾಗ, ಅಧಿಕಾರಿಗಳ ಮೇಲೂ ಹಾಗೂ ತಮ್ಮ ಕುಟುಂಬದ ಮೇಲೂ ಸುಳ್ಳು ಆರೋಪಗಳನ್ನು ಮಾಡಿರುವ ರಾಜಮ್ಮ ಹಾಗೂ ಅವರ ಪುತ್ರ ಮಹದೇವಸ್ವಾಮಿ ವಿರುದ್ಧ ಕಾನೂನು ಮೂಲಕ ಸೂಕ್ತ ಉತ್ತರ ನೀಡಲಾಗುವುದು, ಅಲ್ಲದೆ 1ಕೋಟಿ ಮಾನನಷ್ಟ ಮೊಕ್ಕದಮ್ಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಗಳಿ ಮಾದಪ್ಪ ರವರ ಮೊಮ್ಮಗ ಕೆ.ಎಂ.ಶಿವಮೂರ್ತಿ ಹಾಜರಿದ್ದರು.
Key words: Illegal Account, Allegation, Totally, Baseless , Anand, Mysore







