ಮಂಡ್ಯ: ನ್ಯಾಯಾಲಯ ಕಾಮಗಾರಿಗಳ ಪರಿಶೀಲಿಸಿದ ಹೈಕೋರ್ಟ್ ನ್ಯಾ. ಸುನಿಲ್ ದತ್ ಯಾದವ್

ಮಂಡ್ಯ,ಜನವರಿ,17,2026 (www.justkannada.in): ಮಂಡ್ಯ ನ್ಯಾಯಾಲಯ ಸಂಕೀರ್ಣಕ್ಕೆ ಮಂಜೂರಾಗಿರುವ ಜಾಗದ ಮತ್ತು ನ್ಯಾಯಾಧೀಶರ ವಸತಿಸಮುಚ್ಚಗಳನ್ನು ಇಂದು ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ಪರಿಶೀಲನೆ ನಡೆಸಿದರು.

ಮಂಡ್ಯದ ನ್ಯಾಯಾಧೀಶರಿಗೆ ಸಂಬಂಧಪಟ್ಟಂತೆ ನಗರದ ಮನುಗನಹಳ್ಳಿಯಲ್ಲಿ ವಸತಿಸಮುಚ್ಚಗಳನ್ನು ನಿರ್ಮಾಣ ಮಾಡಲಾಗಿದೆ.  ವಸತಿಸಮುಚ್ಚಗಳ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ರೂ. 5 ಕೋಟಿ ಪ್ರಾಸ್ತವನೆ ಸಲ್ಲಿಸಲಾಗಿತ್ತು. ಸದರಿ ಜಾಗಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ಭೇಟಿ ನೀಡಿ ಕಟ್ಟಡದ ವಿನ್ಯಾಸ ಮತ್ತು ಉಳಿಕೆ ಕಾಮಗಾರಿಗಳ ವೀಕ್ಷಣೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.

ಮದ್ದೂರಿಗೆ ಭೇಟಿ ನೀಡಿ ಮದ್ದೂರು ನ್ಯಾಯಾಲಯಕ್ಕೆ ಸಂಬಂಧಪಟ್ಟ ಕಾಮಗಾರಿಗಳನ್ನೂ ಪರಿಶೀಲನೆ ನಡೆಸಿದರು.

ಮದ್ದೂರಿನ ನ್ಯಾಯಾಲಯಕ್ಕೆ ಸಂಬಂಧಪಟ್ಟಂತೆ ಮದ್ದೂರು ನಗರದ ಸರ್ವೇ ನಂ 800/1, 800/3, 801/1 ರೇಷ್ಮೆ ಇಲಾಖೆಯ ವ್ಯಾಪ್ತಿಗೆ ಬರುವ 4.35 ಎಕ್ಕರೆ ಜಾಗವನ್ನು ಗುರುತಿಸಿ ನ್ಯಾಯಾಲಯ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸದರಿ ಸ್ಥಳವನ್ನು ಹಸ್ತಾಂತರಿಸಲಾಗಿದೆ. ಸದರಿ ಜಾಗದಲ್ಲಿ 21 ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ಮತ್ತು ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣ ಕಾಮಗಾರಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಇರುವ ಏಳು ಸಿವಿಲ್ ನ್ಯಾಯಾಲಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆಗೆ ಸೇರಿದ 22.12 ಗುಂಟೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ.  ಸದರಿ ಜಾಗದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲು ರೂ 25 ಕೋಟಿ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಎಂ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್ ಸತ್ಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Key words: Mandya, High Court, Justice, Sunil Dutt Yadav, court, works