Saturday, September 5, 2026

BDA Apartments

Home Crime ಮಹಿಳಾ ಅಧಿಕಾರಿಗೆ ಧಮ್ಕಿ, ಕೊಲೆ ಬೆದರಿಕೆ: ಮೊನ್ನೆ ಶಿಡ್ಲಘಟ್ಟ, ಇಂದು ಮೈಸೂರು ವರಣಾ..!

ಮಹಿಳಾ ಅಧಿಕಾರಿಗೆ ಧಮ್ಕಿ, ಕೊಲೆ ಬೆದರಿಕೆ: ಮೊನ್ನೆ ಶಿಡ್ಲಘಟ್ಟ, ಇಂದು ಮೈಸೂರು ವರಣಾ..!

ಮೈಸೂರು,ಜನವರಿ,17,2026 (www.justkannada.in): ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕಾದ ಜಮೀನು ಪರಿಶೀಲನೆಗೆ ತೆರಳಿದ ಗ್ರಾಮ ಆಡಳಿತ ಮಹಿಳಾ ಅಧಿಕಾರಿ ಹಾಗೂ ಗ್ರಾಮ ಸಹಾಯಕನಿಗೆ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿ ವಿರುದ್ದ ಮಹಿಳಾ ಅಧಿಕಾರಿ, ರಕ್ಷಣೆ ಕೋರಿ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಬಂಡೀಪಾಳ್ಯ ವೃತ್ತದ ಜಿ ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಎಂಬುವರ ಮೇಲೆ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದ ನಿವಾಸಿ ಜಿ.ಎಂ. ಪುಟ್ಟಸ್ವಾಮಿ ಬೆದರಿಕೆ ಹಾಕಿದ ಆರೋಪಿ.

ಧಮ್ಕಿ  ಹಾಕಿ ಕೊಲೆ ಬೆದರಿಕೆ ಹಾಕಿದ ದೃಶ್ಯಗಳನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಲಾಗಿದೆ. ಈ ವೇಳೆ ಆರೋಪಿ ಪುಟ್ಟಸ್ವಾಮಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿದರು ಎನ್ನಲಾಗಿದೆ.

ಏನಿದು ಘಟನೆ;

ವರುಣಾ ಹೋಬಳಿಯ ಗುಡಮಾದನಹಳ್ಳಿಯಲ್ಲಿ ” ನಿಮ್ಹಾನ್ಸ್ ” ಮಾದರಿ ಆಸ್ಪತ್ರೆ ನಿರ್ಮಿಸಲು ಸರ್ವೆ ನಂ.8 ರಲ್ಲಿ 5 ಎಕರೆ  05 ಗುಂಟೆ, ಸರ್ವೆ ನಂ.60 ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೆ ನಂ.68 ರಲ್ಲಿ 8 ಎಕರೆ 25 ಗುಂಟೆ ಸೇರಿ  ಒಟ್ಟು 20 ಎಕರೆ ಜಾಗ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದೆ. ತಮ್ಮ ಸ್ವಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಆಸಕ್ತಿ ತೋರಿದ ಹಿನ್ನಲೆ ಜಾಗ ಗುರುತಿಸಿ ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಆದೇಶವಾಗಿದೆ. ಈ ಹಿನ್ನಲೆ ಗುಡಮಾದನಹಳ್ಳಿಯಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗೆ ಮಹಿಳಾ ಅಧಿಕಾರಿ ಜಿ ಭವ್ಯ ಹಾಗೂ ನವೀನ್ ಕುಮಾರ್ ತೆರಳಿದ್ದರು.

ಈ ವೇಳೆ ಸದರಿ ಜಮೀನಿನಲ್ಲಿ ಅನಧಿಕೃತವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದ ಪುಟ್ಟಸ್ವಾಮಿ ಧಿಢೀರ್ ಪ್ರತ್ಯಕ್ಷವಾಗಿ ಯಾರನ್ನ ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ..? ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಪುಟ್ಟಸ್ವಾಮಿಯ ದೌರ್ಜನ್ಯ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಗ್ರಾಮ ಸಹಾಯಕ ನವೀನ್ ಕುಮಾರ್ ಗೂ ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿಸಿರುವ ಆರೋಪ ಕೇಳಿ ಬಂದಿದೆ.

ಸರ್ಕಾರಿ ಕೆಲಸವನ್ನ ನಿರ್ಭಯವಾಗಿ ನಿರ್ವಹಿಸಲು ಮಹಿಳಾ ಸಿಬ್ಬಂದಿಯಾದ ನನಗೆ ಭಯದ ವಾತಾವರಣ ಉಂಟು ಮಾಡಿರುವ ಪುಟ್ಟಸ್ವಾಮಿ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಭವ್ಯ ರವರು ಪ್ರಕರಣ ದಾಖಲಿಸಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

Key words: Threats, officer, Mysore,  Varana