ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ: 48 ಗಂಟೆಯಲ್ಲಿ ಎರಡು ಹುಲಿ ಸೆರೆ.

ಮೈಸೂರು,ಡಿಸೆಂಬರ್,29,2025 (www.justkannada.in): ಅರಣ್ಯ ಇಲಾಖೆಯ ಸಿಬ್ಬಂದಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 48 ಗಂಟೆಯಲ್ಲಿ ಎರಡು ಹುಲಿಗಳನ್ನ ಸೆರೆ ಹಿಡಿದಿದ್ದಾರೆ.

ಹೆಚ್.ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೇಟಿಕುಪ್ಪೆ ವಲಯದಲ್ಲಿ 48 ಗಂಟೆಯಲ್ಲಿ ಒಂದು ಗಂಡು ಹುಲಿ, ಒಂದು ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.

ಜೋಡಿ ಹುಲಿಗಳು ಮೇಟಿಕುಪ್ಪೆ ವಲಯದ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದವು. ಅಗಸನಪುರ, ಕಲ್ಲಟ್ಟಿ ಮೇಟಿಕುಪ್ಪೆ ಕೆ.ಎಂ ಹಳ್ಳಿ ಸೊಳ್ಳೆಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹುಲಿಗಳು  ಉಪಟಳ ನೀಡುತ್ತಿದ್ದವು.  ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಜೋಡಿ ಹುಲಿಗಳು ದಾಳಿ ಮಾಡುತ್ತಿದ್ದವು. ಇದರಿಂದ ಬೇಸತ್ತಿದ್ದ ಗ್ರಾಮಸ್ಥರು ಹುಲಿ ಸೆರೆ‌ಹಿಡಿಯುವಂತೆ ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳೂ ಕ್ಯಾಮರಾ ಟ್ರ್ಯಾಪ್, ಥರ್ಮಲ್ ಡ್ರೋಣ್‌ ನಲ್ಲಿ ಹುಲಿಗಳ ಚಲನವಲನದ ಮೇಲೆ ನಿಗಾ ಇರಿಸಿದ್ದರು. ಈ ಮಧ್ಯೆ ಬೇಟೆಯಾಡಿದ ಹಸು ಭಕ್ಷಿಸಲು ಬಂದಾಗ ಅರಣ್ಯ ಸಿಬ್ಬಂದಿಯಿಂದ ಹುಲಿ ತಪ್ಪಿಸಿಕೊಂಡಿತ್ತು.

ಇದೀಗ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿ ಕೊನೆಗೂ ಜೋಡಿ ಹುಲಿಗಳನ್ನ ಸೆರೆ ಹಿಡಿಯಲಾಗಿದೆ. ಮೊನ್ನೆ ಮೇಟಿಕುಪ್ಪೆಯಲ್ಲಿ ಆರು ವರ್ಷದ ಗಂಡು ಸೆರೆ ಹಿಡಿದರೆ ನಿನ್ನೆ ಮೇಟಿಕುಪ್ಪೆ ಸಮೀಪದ ಅಗಸನಪುರದ ಬಳೊ ಹನ್ನೊಂದು ವರ್ಷದ ಹೆಣ್ಣುಹುಲಿ ಸೆರೆಯಾಗಿದೆ

ಬೇಟೆಯಾಡುವ ಶಕ್ತಿ ಕಳೆದುಕೊಂಡಿದ್ದ ಹೆಣ್ಣುಹುಲಿ ಹೀಗಾಗಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿತ್ತು. ಇದೀಗ ಹುಲಿ ಸೆರೆಯಿಂದ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Key words: Forest Department, operation, Two tigers,  captured, 48 hours.