Friday, September 11, 2026

BDA Apartments

Home Front Page ಅಕ್ರಮ ಗಣಿಗಾರಿಕೆ ಕೇಸ್: ಸಿಬಿಐಗೆ ವಹಿಸಿದ್ದರೂ ತನಿಖೆಗೆ ನಿರಾಕರಿಸಿದ ಪ್ರಕರಣಗಳು ಎಸ್ ಐಟಿಗೆ 

ಅಕ್ರಮ ಗಣಿಗಾರಿಕೆ ಕೇಸ್: ಸಿಬಿಐಗೆ ವಹಿಸಿದ್ದರೂ ತನಿಖೆಗೆ ನಿರಾಕರಿಸಿದ ಪ್ರಕರಣಗಳು ಎಸ್ ಐಟಿಗೆ 

ಬೆಂಗಳೂರು,ನವೆಂಬರ್,14,2024 (www.justkannada.in): ಸಿಬಿಐ ತನಿಖೆಗೆ ವಹಿಸಿದ 9 ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ತನ್ನಿಂದ ತನಿಖೆ ಸಾಧ್ಯವಿಲ್ಲವೆಂದು ಸಿಬಿಐ ತಿಳಿಸಿರುವ 06 ಪ್ರಕರಣಗಳನ್ನು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ವಹಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿ ಮಾಹಿತಿ ನೀಡಿದ ಸಚಿವ ಎಚ್.ಕೆ ಪಾಟೀಲ್, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಸಿ.ಬಿ.ಐ ವಾಪಸ್ಸು ಕಳುಹಿಸಿರುವ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ ಎಂದು ವಿವರಿಸಿದರು.

ಅಕ್ರಮ ಗಣಿಗಾರಿಕೆ ಎಲ್ಲಾ ಪ್ರಕರಣಗಳನ್ನು ಸೂಕ್ತವಾದ ತನಿಖೆಗೆ ಒಳಪಡಿಸುವುದು ಅಗತ್ಯವಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟ ಸಭೆಗೆ ಈ ಪ್ರಕರಣಗಳ ತನಿಖೆ ಕುರಿತ ವಿವರಗಳನ್ನು ಮಂಡಿಸಬೇಕೆಂದು ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ನಿರ್ಣಯಿಸಲಾಗುವುದು ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಅಕ್ರಮ ಗಣಿಗಾರಿಕೆ ಕಷ್ಟವುಂಟು ಮಾಡಿದ ʼಸಿʼ ವರ್ಗದ 10 ಗಣಿ ಗುತ್ತಿಗೆದಾರರ ಪ್ರಕರಣಗಳನ್ನು ಸಹ ಈಗಿನ ಎಸ್.ಐ.ಟಿ ತನಿಖೆಗೆ ವಹಿಸಲು ನಿರ್ಣಯಿಸಲಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ವಿವರಿಸಿದರು.

ಮೆ|| ಮೈಸೂರು ಮ್ಯಾಂಗನೀಸ್ ಕಂಪನಿ,  ಮೆ|| ಎಂ.ದಶರಥ ರಾಮಿ ರೆಡ್ಡಿ, ಮೆ|| ಅಲ್ಲಂ ವೀರಭದ್ರಪ್ಪ, ಮೆ|| ಕರ್ನಾಟಕ ಲಿಂಪೊ, ಮೆ|| ಅಂಜನಾ ಮಿನರಲ್ಸ್, ಮೆ|| ರಾಜೀಯ ಖಾನುಂ, ಮೆ|| ಮಿಲನ ಮಿನರಲ್ಸ್ (ಮಹಾಲಕ್ಷಿ & ಕಂ), ಮೆ|| ಎಂ.ಶ್ರೀನಿವಾಸುಲು, ಮೆ|| ಚನ್ನಕೇಶವ ರೆಡ್ಡಿ (ಲಕ್ಷ್ಮೀನರಸಿಂಹ ಮೈನಿಂಗ್ ಕಂಪನಿ ಮತ್ತು ಮೆ|| ಜಿ.ರಾಯಶೇಖರ್ ಕಂಪನಿಗಳು ಅಕ್ರಮ ಗಣಿಗಾರಿಕೆಗಳು ಮಂಜೂರಾದ ಗುತ್ತಿಗೆ ಪ್ರದೇಶದ ಹೊರಗೆ ಶೇ.10 ಕ್ಕಿಂತ ಹೆಚ್ಚು ಗಣಿಗಾರಿಕೆ ಹೊಂಡಗಳು ಮತ್ತು ಮಂಜೂರಾದ ಗುತ್ತಿಗೆಗಿಂತ ಹೆಚ್ಚು ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ ಮತ್ತು ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಲ್ಲಿ ತೊಡಗಿರುವ ಗುತ್ತಿಗೆಗಳು ಮತ್ತು ಇತರೆ ಗುತ್ತಿಗೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ಈ ಮೇಲ್ಕಂಡ ಕಂಪನಿಗಳ ಗಣಿ ಗುತ್ತಿಗೆಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಂಬಂಧ ಲೋಕಾಯುಕ್ತದ ವಿಶೇಷ ತನಿಖಾ ದಳಕ್ಕೆ ವಹಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

Key words: Illegal mining, CBI,  refused, case, SIT, Cabinet meeting