ದೇಶಾದ್ಯಂತ 97 ಕೋಟಿ ಮತದಾರರು: 10.5 ಲಕ್ಷ ಮತದಾನ ಕೇಂದ್ರಗಳ ಸ್ಥಾಪನೆ- ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

ನವದೆಹಲಿ,ಮಾರ್ಚ್,16,2024(www.justkannada.in): ಲೋಕಸಭೆ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗುತ್ತಿದ್ದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ದೇಶಾದ್ಯಂತ 97 ಕೋಟಿ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆಗೆ ದೇಶದಾದ್ಯಂತ 10.5 ಲಕ್ಷ ಮತದಾನ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ. ಪ್ರತಿಯೊಂದು ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ. ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಮ್ಮ ಉದ್ದೇಶವಾಗಿದೆ. ದೇಶಾದ್ಯಂತ 97 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ದೇಶಾದ್ಯಂತ 10.5 ಲಕ್ಷ ಮತದಾನ ಕೇಂದ್ರಗಳು ಇದ್ದು, ಚುನಾವಣಾ ಕರ್ತವ್ಯಕ್ಕೆ ಒಂದೂವರೆ ಕೋಟಿ ಸಿಬ್ಬಂದಿ ಬಳಕೆ ಮಾಡಲಾಗುವುದು. ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂಗಳ ವ್ಯವಸ್ಥೆ ಮಾಡಲಾಗುವುದು  ಎಂದು ತಿಳಿಸಿದರು.

49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರು ಮತಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತಚಲಾಯಿಸಲಿದ್ದಾರೆ.  ಹಾಗೆಯೇ  ದೇಶದಲ್ಲಿ 1.8 ಕೋಟಿ ಮತದಾರರು ಮೊದಲ ಬಾರಿಗೆ ಮತಚಲಾವಣೆ ಮಾಡಲಿದ್ದಾರೆ . 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ. 12 ರಾಜ್ಯಗಳಲ್ಲಿ ಪುರುಷ ಮತದಾರಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ  ಎಂದು ತಿಳಿಸಿದರು.

Key words: 97 crore -voters – country- – Chief Election Commissioner -Rajiv Kumar