ಫ್ಲೋರ್‌ ಕ್ಲೀನರ್‌ ಕುಡಿದು ಅನ್ನನಾಳವನ್ನೇ ಕಳೆದುಕೊಂಡಿದ್ದ 6 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ.

ಬೆಂಗಳೂರು,ಜುಲೈ,24,2023(www.justkannada.in):  ಆಕಸ್ಮಿಕವಾಗಿ ಫ್ಲೋರ್‌ ಕ್ಲೀನರ್‌ ಲಿಕ್ವಿಡ್‌ ಕುಡಿದು ಅನ್ನನಾಳವೇ ಸಂಪೂರ್ಣವಾಗಿ ಸುಟ್ಟುಹೋಗಿದ್ದ 6 ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಅನ್ನನಾಳವನ್ನು ಪುನರ್‌ ನಿರ್ಮಾಣ ಮಾಡಿದ್ದಾರೆ.

ಫೋರ್ಟಿಸ್‌ ಆಸ್ಪತ್ರೆಯ ಚೀಫ್ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಮನೀಶ್ ಜೋಶಿ ಅವರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು, 6 ವರ್ಷದ ಪುಟ್ಟ ಬಾಲಕಿಯು ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಫ್ಲೋರ್‌ ಕ್ಲೀನರ್‌ ಅನ್ನು ಆಕಸ್ಮಿಕವಾಗಿ ಸೇವಿಸಿದೆ. ಇದರಿಂದ ಮಗುವಿನ ಅನ್ನನಾಳ ಹಾಗೂ ಸಣ್ಣ ಕರುಳಿನ ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅನ್ನನಾಳ ಹಾಗೂ ಸಣ್ಣ ಕರುಳು ಸಂಪೂರ್ಣ ಸುಟ್ಟು ಹೋದ ಪರಿಣಾಮ, ಹಾನಿಗೊಳಗಾದ ಆಹಾರ ಪೈಪ್‌ ನ ಒಂದು ಭಾಗವನ್ನು ತೆಗೆದು, ಟ್ಯೂಬ್ ಮೂಲಕ ಅವಳ ಸಣ್ಣ ಕರುಳಿಗೆ ನೇರವಾಗಿ ಆಹಾರವನ್ನು ನೀಡಲು ವ್ಯವಸ್ಥೆ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ದೇಹದ ಹೊರಭಾಗದಿಂದ ಹೆಚ್ಚುವರಿಯಾಗಿ ಫೀಡಿಂಗ್‌ ಟ್ಯೂಬ್‌ ಅಳವಡಿಸಿದ್ದು, ಅದರ ಸಹಾಯದಿಂದಲೇ ಆಹಾರ ಸೇವನೆ ಮಾಡಬೇಕಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇದೂ ಸಹ ಮಗುವಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು.

ಓಸೊಫಾಗೊ-ಗ್ಯಾಸ್ಟ್ರೋ-ಡ್ಯುಯೊಡೆನೊಸ್ಕೋಪಿಗೆ ಒಳಪಡಿಸಿ, ಮೇಲ್ಭಾಗದ ಜೀರ್ಣಾಂಗ ವ್ಯವಸ್ಥೆಯನ್ನು ಮೈಕ್ರೋ ಕ್ಯಾಮರದ ಮೂಲಕ ಪರೀಕ್ಷಿಸಲಾಯಿತು. ಇದರಿಂದ ಮಗುವಿನ ಅನ್ನನಾಳ ಹಾಗೂ ಸಣ್ಣಕರುಳು, ಸುಟ್ಟ ಪರಿಣಾಮ ತೀರ ಕಿರಿದಾಗಿತ್ತು.  ಹೀಗಾಗಿ ಅನ್ನನಾಳದ ಪುನರ್‌ ನಿರ್ಮಾಣಕ್ಕೆ ಮಕ್ಕಳ ತಜ್ಞರು ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಗಳು, ಅರವಳಿಕೆ ತಜ್ಞರ ಸಹಕಾರದೊಂದಿಗೆ ಮಗುವಿನ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಯಿತು. ಈಗಾಗಲೇ ಸಂಪೂರ್ಣವಾಗಿ ಸುಟ್ಟು, ಕಿರಿದಾಗಿದ್ದ ಅನ್ನನಾಳವನ್ನು ತೆರವುಗೊಳಿಸಿ, ಟ್ಯೂಬ್‌ ನನ್ನು ನೇರವಾಗಿ ಮಗುವಿನ ಸಣ್ಣ ಕರುಳಿಗೆ ಅಳವಡಿಸಲಾಗಿದ್ದು, ಈ ಮೂಲಕ ಅನ್ನನಾಳವನ್ನು ಮರುನಿರ್ಮಾಣ ಮಾಡಲಾಗಿದೆ. ಇದರಿಂದ ಇದೀಗ ಮಗುವು ಯಾವುದೇ ಟ್ಯೂಬ್‌ ಇಲ್ಲದೆಯೂ ಸಹ ಆಹಾರವನ್ನು ಬಾಯಿಯ ಮೂಲಕ ಸೇವಿಸಬಹುದಾಗಿದೆ.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, 6 ವರ್ಷದ ಬಾಲಕಿಗೆ ಮರುಜೀವ ನೀಡುವಲ್ಲಿ ನಮ್ಮ ವೈದ್ಯರು ಶ್ರಮ ಶ್ಲಾಘನೀಯ. ನಮ್ಮ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ವೈದ್ಯಕೀಯ ಉಪಕರಣಗಳಿಂದ ಯಾವುದೇ ಸವಾಲಿನ ಪ್ರಕರಣಗಳಾದರೂ ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಯಾವ ವಯಸ್ಸಿನ ಪ್ರಕರಣಗಳೇ ಆದರೂ ಅದನ್ನು ನಿಭಾಯಿಸಲು ಸಮರ್ಥವಾಗಿದ್ದೇವೆ ಎಂದು ಹೇಳಿದರು.

Key words: 6-year-old girl – lost – esophagus -after drinking- floor cleaner –underwent- successful surgery.