40 ಪರ್ಸೆಂಟ್ ಸರಕಾರ ಎಂದು ಜನ ಬೀದಿಯಲ್ಲಿ ಮಾತನಾಡುತ್ತಾರೆ‌, ಬಿಜೆಪಿ ಪಕ್ಷದಲ್ಲಿ ನೈತಿಕತೆ ಇದೆಯೇ..?- ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ.

ಬೆಂಗಳೂರು,ಆಗಸ್ಟ್,23,2022(www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರು ರ ಕೆಂಪುಕೋಟೆ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಅವರದೇ ಪಕ್ಷದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು  ಕೊಡಗು ಜಿಲ್ಲೆಯ ಜೆಡಿಎಸ್ ಮುಖಂಡರ ಜತೆ ಪಕ್ಷ ಸಂಘಟನೆ ಕುರಿತು ಚರ್ಚಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

40 ಪರ್ಸೆಂಟ್ ಸರಕಾರ ಎಂದು ರಾಜ್ಯ ಬಿಜೆಪಿ ಸರಕಾರದ ಬಗ್ಗೆ ಬೀದಿಯಲ್ಲಿ ಜನ ಮಾತನಾಡುತ್ತಾರೆ‌. ಇಲ್ಲೇ ಹೆಗ್ಗಣ ಸತ್ತು ಬಿದ್ದಿದೆ. ಪಿಎಸ್ಐ ನೇಮಕಾತಿ ಹಗರಣ, ಪ್ರಾಧ್ಯಾಪಕರ ನೇಮಕ ಹಗರಣ ಸೇರಿದಂತೆ ಅನೇಕ ಕರ್ಮಕಾಂಡಗಳು ಬೇಕಾದಷ್ಟಿವೆ. ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರ ಬಗ್ಗೆ ಸದ್ದು ಗದ್ದಲ ಇಲ್ಲ. ದೆಹಲಿಯಲ್ಲಿ ಮನೀಶ್ ಸಿಸೋಡಿಯಾ ಅವರ ಮೇಲೆ ಅಬಕಾರಿ ನೀತಿ ವಿಚಾರದಲ್ಲಿ, ಕೇವಲ ಒಂದೆರಡು ಕೋಟಿ ಕುರಿತ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ ಆದರೂ ಕೇಳುವವರು ಇಲ್ಲ ಎಂದು ಕಿಡಿಕಾರಿದರು.

ಮಂಗಳೂರಿನಲ್ಲಿ ಪ್ರಧಾನಿ ಏನು ಸಂದೇಶ ಕೊಡುತ್ತಾರೆ:

ದೇಶಕ್ಕೆ ಆರ್ಥಿಕ ಶಕ್ತಿ ಕೊಡುವಂತ ನಗರ ಮಂಗಳೂರು. ಆದರೆ ದೇಶಕ್ಕೆ ಮಾರಕ ಆಗುವಂತ ವಾತಾವರಣವನ್ನು ಅಲ್ಲಿ ಸೃಷ್ಟಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಸಂದೇಶ ಕೊಡಲು ಮಂಗಳೂರಿಗೆ ಬರುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ ಅವರು, ಶಾಂತಿಯುತವಾಗಿ ಹೂಡಿಕೆದಾರರು ಬರುವ ರೀತಿ ಅವರು ಸಂದೇಶ ಕೊಟ್ಟರೆ ಅವರು ಬಂದಿದ್ದಕ್ಕೂ ಸಾರ್ಥಕ ಆಗುತ್ತದೆ. ಮತ್ತೆ ಇದೇ ಸಂಘರ್ಷ ಮುಂದುವರಿದರೆ ಪ್ರಧಾನಿ ಬಂದರೂ ಏನು ಪ್ರಯೋಜನ ಎಂದರು.

ಈ ರಾಜ್ಯಕ್ಕೆ ಉತ್ತಮ ಹೆಸರಿದೆ. ಬಂಡವಾಳ ಹೂಡಿಕೆದಾರರು  ಯೋಚನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿ ಎಂದು ಬಿಜೆಪಿ ಸರಕಾರಕ್ಕೆ ಸಲಹೆ ನೀಡಿದ ಹೆಚ್ ಡಿಕೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡೂ ಪಕ್ಷದಿಂದಲೂ ಯಾವುದೇ ವಿಚಾರ ಇಲ್ಲ. ಒಬ್ಬರು ಸಾವರ್ಕರ್, ಮತ್ತೊಬ್ಬರು ಮಾಂಸ ತಿನ್ನುವ ವಿಚಾರ ಇಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ, ನಾವು  ವಿಷ್ಯಾಧಾರವಾಗಿ ಹೊರಟಿದ್ದೇವೆ. ಜನತೆ ಮುಂದೆ ನಾವು ಅಭಿವೃದ್ಧಿ ವಿಚಾರ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು

ಪಿಎಸ್ ಐ ಅಕ್ರಮ ಆಯಿತು. ಈಗ ಕೆಪಿಟಿಸಿಎಲ್ ನದ್ದು ಶುರುವಾಗಿದೆ. ಇದರ ಬಗ್ಗೆ ಚರ್ಚೆ ಆಗಬೇಕು. ಆದರೆ ಬೇರೆ ವಿಚಾರ ಚರ್ಚೆ ಆಗುತ್ತಿದೆ. ಬಿಜೆಪಿಯವರು ಸಾವರ್ಕರ್ ರಥ ಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಉಪಯೋಗವೇನು? ಎರಡೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಜನರಿಗೆ  ಏನಾದರೂ ಮಾಡಿ ಆಗ ಸಾವರ್ಕರ್ ಗೆ ಗೌರವ ತಂದಂತೆ ಎಂದು ಅವರು ವಾಗ್ದಾಳಿ ನಡೆಸಿದರು.

ಎಸಿಬಿ ರದ್ದು  ಸಂಬಂಧ ಸುಪ್ರೀಂ ಕೋರ್ಟ್ ಗೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು,  ಕುರಿ ಕಾಯಲು ತೋಳ ಬಿಟ್ಟಂಗೆ ಇದೆ. ತೋಳ ಇಟ್ಟುಕೊಂಡು ಕುರಿ ರಕ್ಷಣೆ ಆಗುತ್ತಾ?. ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದಲ್ಲಿ ಹಾಲೆರೆದಿದ್ದಾರೆ. ಸರ್ಕಾರ ಸರಿಯಾಗಿ ನಿಗಾ ಇಟ್ಟು ಮಟ್ಟ ಹಾಕಬೇಕು ಎಂದು ಹೇಳಿದರು.

 

ಸಿದ್ದರಾಮೋತ್ಸವದಿಂದ ಉಪಯೋಗ ಏನು?:

ನಮ್ಮ ಜನತಾ ಜಲಧಾರೆಯಿಂದ ಕೆರೆಕಟ್ಟೆಗಳು ತುಂಬಿದ್ವು ಇವರ ಉತ್ಸವದಿಂದ ಏನು ಉಪಯೋಗ ಆಯಿತು.

ಸಿದ್ದರಾಮೋತ್ಸವದಿಂದ ಏನಾಗಿದೆ. ಅವರ ವರ್ಚಸ್ಸು ಏನು ಹೆಚ್ಚಾಗಿದೆ. ಅಂತಹ ಎಷ್ಟು ಸಮಾವೇಶ ರಾಜ್ಯದಲ್ಲಿ ಆಗಿದೆ. ನಮ್ಮ ಜನತಾ ಜಲಧಾರೆ ಎಷ್ಟು ಜನ ಸೇರಿದ್ರು. ನಮ್ಮ ಉತ್ಸವದಿಂದ 25 ವರ್ಷಗಳಿಂದ ತುಂಬದ ಕೆರೆಗಳಲ್ಲಿ ಮಳೆ ಬಂದು ನೀರು ತುಂಬಿವೆ. ಅವರ ಉತ್ಸವದಿಂದ ಏನು ಪ್ರಯೋಜನ ಆಗಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಹಾಜರಿದ್ದರು.

Key words: 40 percent –government- BJP- party – HD Kumaraswamy