ಮೈಸೂರಿನಲ್ಲಿ ಜು.2 ರಿಂದ  ಸೆ.29 ರವರೆಗೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ 36ನೇ ಚಾತುರ್ಮಾಸ್ಯ ವ್ರತ…

ಮೈಸೂರು,ಜೂನ್,30,2023(www.justkannada.in): ಮೈಸೂರಿನಲ್ಲಿ ಜುಲೈ 2 ರಿಂದ  ಸೆಪ್ಟಂಬರ್ 29 ರವರೆಗೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ 36ನೇ ಚಾತುರ್ಮಾಸ್ಯ ವ್ರತ ನಡೆಯಲಿದೆ ಎಂದು ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯಾ ಸಮಿತಿ ಗೌರವ ಅಧ್ಯಕ್ಷರಾದ ಆರ್ ವಾಸುದೇವ್ ಭಟ್ ತಿಳಿಸಿದರು.

ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯಾ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತಿವರೇಣ್ಯ ಸಮಾಜ ಸುಧಾರಕರೆಂದು ಹೆಸರುವಾಸಿಯಾದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀ ಪಾದರಕರಕಮಲ ಸಂಜಾತರಾದ ಪೂಜ್ಯ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅವರ ಗುರುಗಳು ನಡೆದುಕೊಂಡು ಬಂದಿದ್ದ ದಾರಿಯಲ್ಲೇ ಸಾಗುತ್ತ, ತಮ್ಮ ಗುರುಗಳು ಪ್ರಾರಂಭಿಸಿದ್ದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು, ವಿದ್ಯಾಶಾಲೆಗಳನ್ನು, ವಿದ್ಯಾರ್ಥಿನಿಲಯಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಯತಿಗಳು ಪ್ರತೀ ವರ್ಷವೂ ಪಾಲನೆ ಮಾಡಿಕೊಂಡು ಬರುತ್ತಿರುವ ಚಾತುರ್ಮಾಸ್ಯ ವ್ರತವನ್ನು ಈ ಬಾರಿ ಮೈಸೂರು ನಗರದಲ್ಲಿ ನಡೆಸಲು ಉದ್ದೇಶಿಸಲಾಗಿದೆ ತಿಳಿಸಿದರು

ಇದೇ ಜುಲೈ 3ನೇ ತಾರೀಖು ಅಂದರೆ ಆಷಾಡ ಶುಕ್ಲಪಕ್ಷ ಹುಣ್ಣಿಮೆ ಯಿಂದ ಸೆಪ್ಟೆಂಬರ್ ತಿಂಗಳು 20ನೇ ತಾರೀಕು ಅಂದರೆ, ಭಾದ್ರಪದ ಶುಕ್ಲ ಚತುರ್ದಶಿಯವರೆಗೆ 90 ದಿನಗಳ ಚಾತುರ್ಮಾಸ್ಯ ವ್ರತವನ್ನು ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

02.07.2023 ಭಾನುವಾರ ಸಾಯಂಕಾಲ ಮೈಸೂರು ನಗರಕ್ಕೆ ಆಗಮಿಸಲಿರುವ ಶ್ರೀಗಳನ್ನು ಸರಸ್ವತಿ ಪುರಂನಲ್ಲಿರುವ ಅಗ್ನಿಶಾಮಕ ದಳ ವೃತ್ತದಲ್ಲಿ ಸ್ವಾಗತಿಸಿ ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮಕ್ಕೆ ಕರೆದೊಯ್ಯಲಾಗುವುದು.  ಶ್ರೀಕೃಷ್ಣ ಸಭಾ ಭವನದಲ್ಲಿ 5 ಗಂಟೆಯಿಂದ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದೆ. ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮವನ್ನು ಮೈಸೂರಿನ ಮಹಾರಜರಾದ ಯದುವೀರಕೃಷ್ಣದತ್ತಚಾಮರಾಜಒಡೆಯರ್ ಉದ್ಘಾಟಿಸಲಿದ್ದಾರೆ. ನೂತನವಾಗಿ ಚುನಾಯಿತರಾದ ಕೃಷ್ಣರಾಜಕ್ಷೇತ್ರದ ಶಾಸಕರಾದ ಶ್ರೀ ಟಿ. ಎಸ್, ಶ್ರೀವತ್ಸ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಚಾಮರಾಜಕ್ಷೇತ್ರದ ಶಾಸಕರಾದ ಶ್ರೀ ಕೆ.ಹರೀರಗೌಡರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

90 ದಿನಗಳ ಪರ್ಯಂತ ನಡೆಯುವ ಈ ಉತ್ಸವದಲ್ಲಿ ಪ್ರತೀದಿನ ಕೃಷ್ಣಧಾಮದಲ್ಲಿ ಸಾಯಂಕಾಲ 5 ರಿಂದ 8.30 ವರೆಗೆ ಭಜನೆ, ವಿದ್ವಾಂಸರಿಂದ ಭಾಗವತ ಪ್ರವಚನ, ಶ್ರೀ ಶ್ರೀಗಳಿಂದ ಸಮಗ್ರ ರಾಮಯಣ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೃಷ್ಣಧಾಮದಲ್ಲಿ 90 ದಿನಗಳ ಪರ್ಯಂತ ಪ್ರತೀ ದಿನ ಸಾಯಂಕಾಲ 5.00 ಗಂಟೆಯಿಂದ 8.00 ಗಂಟೆಯವರೆಗೆ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷದ ವಿತರಣೆಯನ್ನು ಆಯೋಜಿಸಲಾಗಿದೆ. ಭಕ್ತಾದಿಗಳು ಚಾತುರ್ಮಾಸ್ಯ ವರ್ತದ ಮಾಹಿತಿಗಳನ್ನು ಪಡೆಯಲು 9448271837/9342183124/9945230501 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಚಾತುರ್ಮಾಸ್ಯ ಸಮಿತಿಯ ವಿದ್ವತ್ ಸಮಿತಿಯ ಅಧ್ಯಕ್ಷರಾದ ಬೆನಾ ವಿಜೇಂದ್ರ ಚಾರ್ಯ, ಸಮಿತಿಯ ಗೌರವಾಧ್ಯಕ್ಷರು ಆರ್ ವಾಸುದೇವ್ ಭಟ್, ಅಧ್ಯಕ್ಷರು ಎಂ ಕೃಷ್ಣ ದಾಸ್ ಪುರಾಣಿಕ್, ಕಾರ್ಯಧ್ಯಕ್ಷರು ರವಿ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಆರ್ ತಂತ್ರಿ, ಪ್ರಚಾರ ಸಮಿತಿಯ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್, ಹಾಜರಿದ್ದರು.

Key words: 36th Chaturmasya- Vrat – Vishwaprasannatirtha Sri -Pejavara Mutt – Mysore