ಆಧುನಿಕ ಭಾರತದ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ – ಸಿಎಂ ಬಸವರಾಜ ಬೊಮ್ಮಾಯಿ. 

ಬೆಳಗಾವಿ ಡಿಸೆಂಬರ್ 17,2021(www.justkannada.in):  ಡಾ: ಬಿ.ಆರ್. ಅಂಬೇಡ್ಕರ್ ಆಧುನಿಕ ಭಾರತದ ಪಿತಾಮಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಳಗಾವಿಯ ಸುವರ್ಣ ಸೌಧ ಮುಂಭಾಗದಲ್ಲಿರುವ ಬಸ್ತವಾಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಅವರಿಂದಾಗಿ ನಾವು ಇಂದು ವಿಧಾನ ಸಭೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನ ರಚನೆ, ಗಣತಂತ್ರ ತರದೇಹೋಗಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ, ಕಾನೂನು ಸುವ್ಯವಸ್ಥೆ, ಶಾಂತಿ ಸಮೃದ್ಧಿ ಇರುತ್ತಿರಲಿಲ್ಲ ಎಂದರು.

ಅವರು ರಚಿಸಿರುವ ಸಂವಿಧಾನ ಬಹಳ ಉತ್ಕೃಷ್ಟವಾಗಿರುವಂಥದ್ದು. ಬೇರೆ ದೇಶಗಳ ಸಂವಿಧಾನಗಳಿಗಿಂತ ಹೆಚ್ವು ಜನಪರ, ಮಾನವೀಯ ಗುಣಗಳಿರುವ, ದೇಶವನ್ನು ಕಟ್ಟುವ ಸಂವಿಧಾನ. ಹಾಗಾಗಿ ವಿಶ್ವಕ್ಕೆ ಮಾದರಿ ಎನಿಸುವ ಸಂವಿಧಾನ ನಮ್ಮದು.ಜನರು ನಿರಂತರವಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ನಾವು ಕೇವಲ ಮತ ಹಾಕಿದ್ರೆ ಸಾಲು. ಮತ ಹಾಕಿದ ಮೇಲೆ ವ್ಯವಸ್ಥೆ ಜನಪರವಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಗಮನಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು ಮಾತ್ರವಲ್ಲದೇ, ಸಾಮಾನ್ಯ ಜನರೂ ಮಾಡಬೇಕು. ಅದನ್ನು ಮಾಡಿದಾಗ ದೇಶ ಸಮೃದ್ಧಿ ಹೊಂದಲು ಸಾಧ್ಯ. ಅದು ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ. ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಯಕೆ ಆಗಿತ್ತು. ಅವರ ಎಲ್ಲ ವಿಚಾರಗಳನ್ನು ಸಂಪೂರ್ಣವಾಗಿ ಒಪ್ಪಿ ಸಂವಿಧಾನದನ್ವಯ ಆಡಳಿತ ಮಾಡುತ್ತಿದ್ದೇವೆ. ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳನ್ನು ನಿಮ್ಮ ನೆಚ್ಚಿನ ಧರ್ಮಗ್ರಂಥ ಯಾವುದೆಂದು ಕೇಳಿದಾಗ ಅವರು ಸಂವಿಧಾನವೇ ನನ್ನ ಧರ್ಮ ಗ್ರಂಥ ಎಂದು ಹೇಳಿದ್ದಾರೆ. ನಮ್ಮ ನಾಯಕರ ಆದರ್ಶಗಳನ್ನು ಮುಂದಿಟ್ಟುಕೊಂಡು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.

ಸಂಜಯ ಪಾಟೀಲರು ಹೋರಾಟಗಾರರು. ಜನಪರ ಕೆಲಸಗಳಲ್ಲಿ ಸದಾ ಮುಂದಿರುತ್ತಾರೆ. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡುವ ಸಂದರ್ಭದಲ್ಲಿ 107 ಎಕರೆ ಜಮೀನು ಪಡೆಯಲು ಬಸ್ತವಾದ ಮತ್ತು ಹಲಗ ಗ್ರಾಮದ ರೈತರಿಂದ ಪಡೆದದ್ದು. ಒಂದೇ ದಿನದಲ್ಲಿ 107 ಎಕರೆ ಜಮೀನನ್ನು ಪಡೆದ ಶ್ರೇಯಸ್ಸು ಅಂದಿನ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಶಾಸಕ ಸಂಜಯ ಪಾಟೀಲ್ ಅವರಿಗೆ ಸಲ್ಲಬೇಕು ಎಂದರು.

ಬಸ್ತವಾಡ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಹಾಗೂ ಪ್ರೌಢ ಶಾಲೆ ನೀಡುವುದು ನಮ್ಮ ಧರ್ಮ. ಅದನ್ನು ಇಂದೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಶಾಶ್ವತ ಕುಡಿಯುವ ನೀರಿ ವ್ಯವಸ್ಥೆ ಮಂಜೂರು ಮಾಡುವುದಾಗಿ ತಿಳಿಸಿದರು.

ಹೊಸ ಪ್ರೌಢ ಶಾಲೆಯನ್ನು ಮಂಜೂರು ಮಾಡುವ ನೀತಿ ಬಂದಿಲ್ಲ. ನೀತಿ ರೂಪಿಸಿದ ಕೂಡಲೇ ಜಮೀನು ಗುರುತಿಸಿ ಬಸ್ತವಾಡ ಗ್ರಾಮಕ್ಕೆ ಹೊಸ ಪ್ರೌಢ ಶಾಲೆಯನ್ನು ಮಂಜೂರು ಮಾಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.

key words: Dr. Baba Saheb Ambedkar –  father of modern India-CM- Basavaraja Bommai.