ಅತಿ ಸಣ್ಣ ಸಾಲಗಳನ್ನ ನೀಡಿ ವಂಚಿಸುವ ಚೀನಾ ಸ್ವಾಮ್ಯದ ಸಂಪರ್ಕ ಜಾಲ ಬೆಂಗಳೂರಿನಲ್ಲಿ ಪತ್ತೆ.

ಬೆಂಗಳೂರು, ಡಿಸೆಂಬರ್ 8, 2021 (www.justkannada.in): ಭಾರತದಲ್ಲಿರುವ ಸುಲಭವಾಗಿ ಮೋಸ ಹೋಗುವ ಜನರನ್ನು ವಂಚಿಸಲು ಚೀನಾ ಸ್ವಾಮ್ಯದ ಸಂಪರ್ಕಜಾಲವೊಂದು ಬೆಂಗಳೂರನ್ನು ತನ್ನ ಚಟುವಟಿಕೆಗಳ ಕೇಂದ್ರ ಸ್ಥಾನವನ್ನಾಗಿ ಮಾಡಕೊಂಡಿದ್ದಂತಹ ಪ್ರಕರಣವನ್ನು ನಗರದ ಪೊಲೀಸರು ಭೇದಿಸಿದ್ದಾರೆ.

ಈ ನೆಟ್‌ ವರ್ಕ್ (ಸಂಪರ್ಕಜಾಲ), ಸಾಲ ಬೇಕಾಗಿರುವವರಿಗೆ ಬಲೆ ಬೀಸಲು ಮೊಬೈಲ್ ಆ್ಯಪ್‌ ಗಳನ್ನು ಬಳಸುತಿತ್ತು. ಅದಕ್ಕಾಗಿ ಮಾಸಿಕ ರೂ.೪,೦೦೦ದಂತೆ ಪ್ರೋತ್ಸಾಹಧನವನ್ನು ನೀಡುವುದಾಗಿ ತಿಳಿಸಿ ಕೆಲವು ಏಜೆಂಟರನ್ನೂ ನೇಮಿಸಿಕೊಂಡಿತ್ತು. ನವೆಂಬರ್ ೨೪ರಂದು ಸೆಂಟ್ರಲ್ ಕ್ರೈಂ ಬ್ರ್ಯಾಂಚ್‌ ನ ಅಧಿಕಾರಿಗಳು ಚೀನಾ ಮೂಲದ ಕಂಪನಿ ಎಂದು ಆರೋಪಿಸಿರುವ ಲಿಕೊರಿಸ್ ಟೆಕ್ನಾಲಜಿ ಎಂಬ ಹೆಸರಿನ ಹೆಚ್‌ಆರ್ ಎಕ್ಸಿಕ್ಯೂಟಿವ್ ಕಾಮರಾಜ್ ಮೋರೆ, ಹಾಗೂ ತಂಡದ ಮುಖ್ಯಸ್ಥ ದರ್ಶನ್ ಚೌಹಾಣ್ ಎಂಬುವವರನ್ನು ಬಂಧಿಸಿದ್ದಾರೆ.

ಇವರು ೫೨ ಕಂಪನಿಗಳ ಹೆಸರುಗಳನ್ನು ಬಳಸಿಕೊಂಡು, ಕಳೆದ ಎರಡು ವರ್ಷಗಳಲ್ಲಿ ೮೦ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು ಎನ್ನುತ್ತದೆ ಪೊಲೀಸ್ ಮೂಲಗಳು. ಒಂದು ಪೊಲೀಸರ ತಂಡ, ಮಾರತಹಳ್ಳಿ ಬಳಿಯಿರುವ ಮುನ್ನೆಕೊಲಾಳದಲ್ಲಿರುವ ಸುಮಾರು ೧೦೦ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿರುವಂತಹ ಈ ಕಂಪನಿಯ ಕಚೇರಿಯ ಮೇಲೆ ದಾಳಿ ನಡೆಸಿ ೮೩ ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆದುಕೊಂಡರು. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಈ ಕುರಿತು ಮಾಹಿತಿ ನೀಡಿ ಈ ಚೀನಾ ಮೂಲದ ಕಂಪನಿಗಳು ಭಾರತದ ಉದ್ಯೋಗಿಗಳನ್ನು ಬಳಸಿಕೊಂಡು ತನ್ನ ಮುಂಬದಿಯ ಕೆಲಸಗಳನ್ನು ನಡೆಸುತ್ತವೆ. “ಇವರು ಒಂದು ಕಂಪನಿಯನ್ನು ತೆರೆದು, ತಮ್ಮ ಕೆಲಸವನ್ನು ನಡೆಸಲು ವ್ಯವಸ್ಥಾಪಕರು ಹಾಗೂ ನಿರ್ದೇಶಕರನ್ನು ನೇಮಿಸುತ್ತಾರೆ, ಆದರೆ ಸ್ವತಃ ಎಲ್ಲೂ ಬಹಿರಂಗವಾಗಿ ಗೋಚರಿಸುವುದಿಲ್ಲ,” ಎಂದರು.

ಹೇಗೆ ಕಾರ್ಯನಿರ್ವಹಿಸುತ್ತಾರೆ

ಈ ಹಗರಣದ ತಪಾಸಣೆಯನ್ನು ನಡೆಸಿದಂತಹ ಸಹಾಯಕ ಪೊಲೀಸ್ ಆಯುಕ್ತ ಜಗನ್ನಾಥ್ ರೈ (ಆರ್ಥಿಕ ಅಪರಾಧಗಳ ಘಟಕ), ಅವರು ಹೇಳಿದ ಪ್ರಕಾರ ಈ ಚೀನಾ ಮೂಲದ ಸಂಸ್ಥೆಗಳು ಆಕರ್ಷಕ ಹೆಸರುಗಳಿರುವ ಮೊಬೈಲ್ ಆ್ಯಪ್‌ಗಳನ್ನು ಬಳಸುತ್ತವಂತೆ.

“ನೀವು ಈ ಆ್ಯಪ್‌ಗಳನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಮ್ಮೆ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡ ನಂತರ, ಅದರಲ್ಲಿ ನಿಮ್ಮ ಎಲ್ಲಾ ಸಂಪರ್ಕ ಸಂಖ್ಯೆಗಳು ಹಾಗೂ ಇತರೆ ವಿವರಗಳನ್ನು ಕೇಳುತ್ತದೆ. ನೀವು ಅಲ್ಲಿ ಗೋಚರಿಸುವ agree ಗುಂಡಿಯನ್ನು ಒತ್ತಿದ ನಂತರ ಮಾತ್ರ ಮುಂದುವರೆಯಬಹುದು,” ಎಂದು ರೈ ವಿವರಿಸಿದರು.

ಈ ಆ್ಯಪ್ ಮೂಲಕ ಸಾಲ ಮಂಜೂರಾತಿ ಬಹಳ ಸುಲಭ ಹಾಗೂ ಸರಾಗವಾಗಿ ಆಗುತ್ತದೆ, ಆದರೆ ನಂತರ ಏನಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. “ಗ್ರಾಹಕರಿಗೆ ಸಾಲ ನೀಡಿ ಅದಕ್ಕೆ ದುಬಾರಿ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುತ್ತದೆ. ಉದಾಹರಣೆಗೆ ನಿಮಗೆ ರೂ.೫,೦೦೦ ಸಾಲ ಮಂಜೂರಾದರೆ, ರೂ.೧,೦೦೦ ಸಂಸ್ಕರಣಾ ಶುಲ್ಕವನ್ನಾಗಿ ಕಡಿತಗೊಳಿಸಲಾಗುತ್ತದೆ. ನೀವು ಸಾಲದ ಮೊತ್ತವನ್ನು ಹಿಂದಿರುಗಿಸಲು ವಿಫಲವಾದರೆ ಆ ಕಂಪನಿಯ ಕಾಲ್ ಸೆಂಟರ್‌ನ ಸಿಬ್ಬಂದಿಗಳು ಪದೇ ಪದೇ ಕರೆ ಮಾಡಿ ತೊಂದರೆ ನೀಡುತ್ತಾರೆ. ಅವರ ನೇಮಕಾತಿ ದಾಖಲಾತಿಗಳಲ್ಲಿ ತಪ್ಪುಗಳನ್ನು ಹುಡುಕುವುದು ಕಷ್ಟ. ಆದರೆ ಅವರು ಅನುಸರಿಸುವ ವಿಧಾನಗಳು ತಾತ್ವಿಕವಲ್ಲ,” ಎನ್ನುವುದು ಪೊಲೀಸರ ಅಭಿಪ್ರಾಯ.

ಮೋಸಗಾರರು ತಾವು ನೇಮಕ ಮಾಡಿಕೊಂಡಿರುವ ಸಿಬ್ಬಂದಿಗಳ ಮೂಲಕ ನಿಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡುಗಳನ್ನು ಸಂಗ್ರಹಿಸುತ್ತಾರೆ. ಸಾಲ ಪಡೆದವರು ಸಾಲ ಮರುಪಾವತಿಸುವಲ್ಲಿ ವಿಫಲರಾದರೆ, ಈ ಕಂಪನಿಗಳು ನಕಲಿ ಬಂಧನದ ವಾರಂಟ್‌ ಗಳನ್ನು ಬಳಸುತ್ತವೆ ಹಾಗೂ ನಿಮ್ಮ ಎಲ್ಲಾ ಸಂಪರ್ಕಗಳಿಗೂ ಕೆಟ್ಟ ಸಂದೇಶಗಳನ್ನು ಕಳುಹಿಸಲಾಗುತ್ತದೆ.

“ನಿಮ್ಮ ಮೂಲಕವೇ ಎಲ್ಲಾ ವೈಯಕ್ತಿಕ ವಿವರಗಳನ್ನು ಪಡೆದು ನಿಮ್ಮ ವಿರುದ್ಧವೇ ಉಪಯೋಗಿಸುತ್ತಾರೆ. ನಿಮ್ಮ ಭಾವಚಿತ್ರಗಳನ್ನು ಎಲ್ಲಾ ವೆಬ್‌ಸೈಟ್‌ ಗಳಲ್ಲಿಯೂ ಹಾಕಿ, ನಿಮಗೆ ಕೆಟ್ಟ ಹೆಸರು ತರಲು ನಿಮ್ಮ ಮೊಬೈಲ್ ಫೋನ್‌ ಗಳಲ್ಲಿರುವ ನಿಮ್ಮ ಎಲ್ಲಾ ಸಂಪರ್ಕಗಳಿಗೂ ಕಳುಹಿಸುತ್ತಾರೆ,” ಎನ್ನುತ್ತಾರೆ ಪೊಲೀಸ್ ಆಯುಕ್ತ ಪಂತ್ ಅವರು.

ಕಳೆದ ವರ್ಷ ಹೈದ್ರಾಬಾದ್‌ನಲ್ಲಿ ಈ ಹಗರಣದಲ್ಲಿ ಸಿಲುಕಿಕೊಂಡಂತಹ ಮೂವರು ಆತ್ಮಹತ್ಯೆ ಮಾಡಿಕೊಂಡರು. “ಈ ಕಂಪನಿಗಳು ತಮ್ಮ ಪಾಲಿನ ಹಣವನ್ನು ದೋಚಿದ ನಂತರ ತಮ್ಮ ವ್ಯಾಪಾರಗಳನ್ನು ಮುಚ್ಚಿ ಬೇರೆ ಸ್ಥಳಕ್ಕೆ ಹೋಗುತ್ತಾರೆ. ಆದರೆ ಅವರ ದಾಖಲೆಗಳ ನಿರ್ವಹಣೆ ಅಚ್ಚುಕಟ್ಟಾಗಿರುತ್ತದೆ ಹಾಗೂ ಯಾವುದೇ ಕಾನೂನು ತೊಡಕುಗಳು ಎದುರಾಗದಿರುವಂತೆ ಎಚ್ಚರಿಕೆ ವಹಿಸುತ್ತಾರೆ. ಇವರಿಂದ ಸಾಲ ಪಡೆಯುವವರ ಪೈಕಿ ಸಾಮಾನ್ಯವಾಗಿ ಆಟೋ ಚಾಲಕರು, ಸಣ್ಣ ವ್ಯಾಪಾರ ಮಾಡುವ ತಳ್ಳುಗಾಡಿ ವ್ಯಾಪಾರಸ್ಥರೇ ಹೆಚ್ಚು.

“ಈ ಕಂಪನಿಗಳು ಮೊದಲು ರೂ.೫೦೦ ಸಾಲ ನೀಡಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸುತ್ತವೆ. ಸಾಲಗಾರರು ತಮ್ಮ ಸಾಲದ ಮೇಲಿನ ಬಡ್ಡಿ ತುಂಬಾ ಹೆಚ್ಚಾದಾಗಲೇ ಎಚ್ಚೆತ್ತುಕೊಳ್ಳುತ್ತಾರೆ, ಅಥವಾ ತಾವು ಪಡೆದ ಸಾಲ ಮುಗಿಯುತ್ತಲೇ ಇಲ್ಲ ಎಂದು ಅರಿತಾಗ ಮಾತ್ರ ಎಚ್ಚೆತ್ತುಕೊಳ್ಳುತ್ತಾರೆ. ಇಂತಹ ಕಂಪನಿಗಳಿಂದ ಒಮ್ಮೆ ಸಾಲ ತೆಗೆದುಕೊಂಡರೆ ಜೀವಮಾನಪರ್ಯಂತ ಅನುಭವಿಸಿದಂತಾಗುತ್ತದೆ,” ಎನ್ನುತ್ತಾರೆ ರೈ.

ಪರೋಕ್ಷ ಸಾಲ ನೀಡುವ ಪ್ರಕ್ರಿಯೆ ಭೂಗತ ಲೋಕವನ್ನು ಬೆಳೆಸಿದಂತೆಯೇ ಎಂದು ಹಿರಿಯ ಪೊಲೀಸ್ ಅಭಿಪ್ರಾಯ ಪಡುತ್ತಾರೆ. “ನೀವು ಮುಂಜಾನೆ ಸಿಟಿ ಮಾರುಕಟ್ಟೆಗೆ ಹೋದರೆ ಅಲ್ಲಿ ಸಣ್ಣ ವ್ಯಾಪಾರಸ್ಥರಿಗೆ ದಿನವೊಂದಕ್ಕೆ ಶೇ.೧೦ರಷ್ಟು ಬಡ್ಡಿ ದರದಲ್ಲಿ ಹಣವನ್ನು ಸಾಲ ನೀಡುವವರನ್ನು ಕಾಣಬಹುದು. ಆದೇ ರೀತಿ ಈ ತಂತ್ರಜ್ಞಾನ ಯುಗದಲ್ಲಿ ಈ ರೀತಿಯ ಸಾಲ ನೀಡಿ ಜನರನ್ನು ಹಿಂಡುವ ಚಟುವಟಿಕೆ ಆನ್‌ಲೈನ್ ಆಗಿದೆ,” ಎನ್ನುತ್ತಾರೆ. ಯಾವುದೇ ಕಾಗದಪತ್ರದ ವ್ಯವಹಾರ ಇಲ್ಲ, ಸುಲಭವಾಗಿ ಸಾಲ ದೊರೆಯುತ್ತದೆ ಎಂಬ ಕಾರಣಕ್ಕಾಗಿ ಅನೇಕರು ಸುಲಭವಾಗಿ ಅವರ ಬಲೆಗೆ ಬೀಳುತ್ತಾರೆ. “ಭಾರತದಲ್ಲಿ ಈ ರೀತಿಯ ಸಂಪ್ರದಾಯ ವ್ಯಾಪಕವಾಗಿ ಬೆಳೆದಿದೆ. ಈ ಮೂಲಕ ಪ್ರತಿ ವಿವಾಹ ಸಮಾರಂಭ, ನಾಮಕರಣ ಹಾಗೂ ಹುಟ್ಟಿದ ಹಬ್ಬಗಳನ್ನೂ ಸಹ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ,” ಎನ್ನುತ್ತಾರೆ.

ಈ ಆ್ಯಪ್‌ಗಳು ಏಕೆ ಅಪಾಯಕಾರಿ. ನಿಮ್ಮ ಎಲ್ಲಾ ಫೋನ್ ಸಂಪರ್ಕಗಳನ್ನೂ ಪಡೆದುಕೊಳ್ಳುತ್ತವೆ. ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಚಿತ್ರಗಳನ್ನೂ ಪಡೆದುಕೊಳ್ಳುತ್ತವೆ. ನೀವು ಸಾಲ ಹಿಂದಿರುಗಿಸಲು ವಿಫಲರಾದರೆ ನಿಮ್ಮ ಕುಟುಂಬಸ್ಥರನ್ನು ಅವಮಾನಿಸುತ್ತವೆ. ನಿಮ್ಮ ಸ್ನೇಹಿತರಿಗೆ ಕರೆ ಮಾಡಿ ನಿಮಗೆ ಅವಮಾನ ಮಾಡುತ್ತವೆ. ನಿಮ್ಮ ಭಾವಚಿತ್ರಗಳನ್ನು ಕೆಟ್ಟ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: china-based –network- fraudulent –loans- found – Bangalore