ಬಿಜೆಪಿ ವಿರುದ್ಧ ವಾಗ್ದಾಳಿ: ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ ಗೆ ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ.

ಮೈಸೂರು,ಡಿಸೆಂಬರ್,8,2021(www.justkannada.in): ತಮ್ಮ ವಿರುದ್ಧ ಸರಣಿ ಟ್ವಿಟ್ ಮಾಡಿ ಸಿದ್ದು ಸೂತ್ರ ಕಾಂಗ್ರೆಸ್ ಫ್ಯಾಮಿಲಿ  ಎಂದು ಟೀಕಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ವೈಯಕ್ತಿಕವಾಗಿ ನಾನು ಯಾರ ಮೇಲು ಟೀಕೆ ಮಾಡಲ್ಲ.ಕೇವಲ ವಿಚಾರಾಧಾರಿತ ಇಶ್ಯೂ ಬಗ್ಗೆ ಮಾತ್ರ ನಾನು ಟೀಕೆ ಮಾಡುತ್ತೇನೆ. ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ದ್ವೇಷವಿಲ್ಲ. ಕೇವಲ ತತ್ವ ಸಿದ್ದಾಂತದ ವಿಚಾರದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿವೆ. ಜೆಡಿಎಸ್ ನವರು ಜಾತ್ಯಾತೀತ ಎಂದು ಹೇಳಿ ಕೊಳ್ತಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಆ ಬಗ್ಗೆ ನಾನು ಮಾತನಾಡಿದರೆ ಅವರ ಮೇಲೆ ದ್ವೇಷ ಸಾಧಿಸುತ್ತಿದ್ದೇನೆಂದು ಹೇಳುತ್ತಾರೆ. ನನಗೆ SCF( ಸಿದ್ದು ಸೂತ್ರ ಕಾಂಗ್ರೆಸ್ ಫ್ಯಾಮಿಲಿ) ಅಂತಾರಾ ಅವರು. ಇಡೀ ರಾಜ್ಯ ದೇಶಕ್ಕೆ ಗೊತ್ತು ಯಾರು ಕುಟುಂಬ ರಾಜಕಾರಣ ಮಾಡ್ತಾರೆ ಅಂತ. ಅದನ್ನ ನಾನು ಹೇಳುವ ಅಗತ್ಯ ಇಲ್ಲ. ಒಂದು ಗಂಟೆಗಳ ಸುದ್ದಿಗೋಷ್ಠಿ ನಡೆಸಿದ ನಾನು ಒಂದೇ ಒಂದು ಮಾತನ್ನ ಜೆಡಿಎಸ್ ಬಗ್ಗೆ ಮಾತನಾಡಿಲ್ಲ. ಕೇವಲ ವಿಚಾರಗಳ ಬಗ್ಗೆ ಸಮಸ್ಯೆ ಬಗ್ಗೆ ಮಾತ್ರ ಮಾತಾಡಿದ್ದೇನೆ. ಅದು ಕೇವಲ ಬಿಜೆಪಿ ಬಗ್ಗೆ ಮಾತ್ರವೇ‌ ಈಗ ಇಶ್ಯು ಬಗ್ಗೆ ಮಾತಾಡಿದ್ದೀನಿ. ಅಲ್ಲಿಗೆ ನಿಮಗೆ ಗೊತ್ತಾಗುತ್ತೆ ನಾನು ಅನಗತ್ಯವಾಗಿ ಜೆಡಿಎಸ್‌ ಬಗ್ಗೆ ಮಾತಾಡಲ್ಲ ಅಂತ ಎಂದು ಹೇಳಿದರು.

ನಾ ಕಾಹೂಂಗಾ, ಕಾನೇ ದೂಂಗಾ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತು ಏನಾಯಿತು

ಇದೇ ವೇಳೆ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಇದು 40% ಸರ್ಕಾರ, ಇವರಿಗೆ ನಾಚಿಕೆ ಆಗಬೇಕು. ನಾ ಕಾಹೂಂಗಾ, ಕಾನೇ ದೂಂಗಾ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತು ಏನಾಯಿತು. ಇವರ ಬಾಯಲ್ಲಿ ಹೇಳೊದೊಂದು ಮಾಡೊದೊಂದು. ಕೊರೊನಾ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದರು. ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊಡಲಾಗಲಿಲ್ಲ. ಪರಿಣಾಮ 36 ಜನ ಆಕ್ಸಿಜನ್ ಸಿಗದೇ ಸಾವನ್ನಪ್ಪಿದರು. ಕೊರೊನಾದಂತಹ ಮಾರಕ ರೋಗ ಎದುರಿಸುವಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಇವತ್ತು ಲಂಚ ಇಲ್ಲದೇ ಯಾವುದೇ ಕೆಲಸಗಳಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅದಾಯಕ್ಕಿಂತ ಖರ್ಚು ಹೆಚ್ಚು ಇರಬಾರದು. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದರೆ ಮೂರು ಮಾನದಂಡ ಪಾಲಿಸಬೇಕು. ಮೂರು ಮಾನದಂಡವನ್ನು ಈ ಸರ್ಕಾರ ನಿರ್ವಹಣೆ ಮಾಡುತ್ತಿದೆಯೇ..? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಎಲ್ಲಾ ಪಕ್ಷ ಸುತ್ತಾಡಿರುವ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ನನ್ನ ವಿರುದ್ಧ ಮಾತಾಡಲು ಅವರಿಗೆ ನೈತಿಕತೆ ಏನಿದೆ.

ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅನ್ಯೂನತೆ ಇದೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಶ್ರೀನಿವಾಸ ಪ್ರಸಾದ್ ಕೋಮುವಾದಿ ಪಕ್ಷ ಸೇರಿ ನನ್ನ ವಿರುದ್ಧ ಹೇಳಿಕೆ ನೀಡಲು ನೈತಿಕತೆ ಇಲ್ಲ. ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷ, ಬಿಜೆಪಿ ಹೀಗೆ ಎಲ್ಲಾ ಪಕ್ಷ ಸುತ್ತಾಡಿದ್ದಾರೆ. ನನ್ನ ವಿರುದ್ಧ ಮಾತಾಡಲು ಅವರಿಗೆ ನೈತಿಕತೆ ಏನಿದೆ ಎಂದು ಕಿಡಿಕಾರಿದರು.

ಶ್ರೀನಿವಾಸ್ ಪ್ರಸಾದ್ ಗೆ ಅನಾರೋಗ್ಯ ಹಿನ್ನೆಲೆ. ಅವರು ಆದಷ್ಟು ಬೇಗ ಗುಣಮುಖರಾಗಲಿ. ಇನ್ನೂ ಹೆಚ್ಚು ವರ್ಷಗಳ ಕಾಲ ಬದುಕಿರಬೇಕು ಅವರು ಎಂದರು.

ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಮೇಕೆದಾಟು ಕಾರ್ಯಕ್ಕೆ ಡಿಪಿಆರ್ ಮಾಡಿಸಿದ್ದೆ ಸಿದ್ದರಾಮಯ್ಯ ಸರ್ಕಾರ. ಕೇಂದ್ರದ ಒಪ್ಪಿಗೆಗೆ ಕಳುಹಿಸಿದ್ದೆ ನಾವು. ಡಿಕೆಶಿ ನನ್ನ ನಡುವೆ ಯಾವುದೇ ಬಿನ್ನಾಭಿಪ್ರಾಯವಿಲ್ಲ. ಈಗ ಪಕ್ಷ ಈ ವಿಚಾರವನ್ನ ಕೈಗೆತ್ತಿಕೊಂಡಿದೆ. ಬೆಂಗಳೂರಿನಿಂದ ಕೈಗೊಳ್ಳುವ ಪಾದಯಾತ್ರೆಗೆ ನಾನು ಸಹ ಪಾಲ್ಗೊಳ್ಳುತ್ತೇನೆ. ಬಿಜೆಪಿಯವರು ರಾಜಕೀಯ ಪ್ರೇರಿತವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಅಷ್ಟೇ. ನಾನು ಡಿಕೆಶಿ ಅನ್ಯೂನ್ಯವಾಗಿದ್ದೇವೆ ಎಂದು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.

Key words: against –BJP-Former CM-Siddaramaiah-mysore- HD Kumaraswamy