ಅಕ್ಕಿ ಬದಲು ಹಣ : ಸರ್ಕಾರದ ವಿರುದ್ದ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಾಗ್ದಾಳಿ.

ಉಡುಪಿ,ಜೂನ್,29,2023(www.justkannada.in):  ಅಕ್ಕಿ ಕೊರತೆ ಹಿನ್ನೆಲೆ ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನೀವು ಈಗ ಅಕ್ಕಿ ಸಿಕ್ಕಿಲ್ಲ ಹಣ ಕೊಡುತ್ತಿದ್ದೇವೆ ಎನ್ನುತ್ತಿದ್ದೀರಿ. ನೀವು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳುವಾಗ ಕೇಂದ್ರದ 5 ಕೆ.ಜಿ ಅಕ್ಕಿ ಸೇರಿ ಅಂತ ಹೇಳಿದ್ದೀರಾ ? ಹಾಗಾದರೆ ಕೇಂದ್ರ ನೀಡುವ ಅಕ್ಕಿಗೆ ರಾಜ್ಯದಿಂದ ಹಣ ನೀಡುತ್ತಿದ್ದೀರಾ? ಜನರಿಗೆ ತಪ್ಪು ಮಾಹಿತಿ ಒದಗಿಸಬೇಡಿ. ನೀವು ಹೇಳಿದ್ದು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು. ಹೀಗಾಗಿ 10 ಕೆಜಿ ಅಕ್ಕಿ ಕೊಡಬೇಕಲ್ವ?  ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರ ಬಿಪಿಎಲ್ ಇರುವವರಿಗೆ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ನೀಡುತ್ತಿದೆ. ಒಂದು ತಿಂಗಳಿಗೆ ಕೇಂದ್ರ ಸರಕಾರಕ್ಕೆ 18ರಿಂದ 19 ಸಾವಿರ ಕೋಟಿ ಖರ್ಚಾಗುತ್ತದೆ. ತೆಲಂಗಾಣದಲ್ಲಿ ಕೇಂದ್ರ ಸರಕಾರದ ಅಕ್ಕಿ ಎಂದು ರಶೀದಿ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ಇದನ್ನು ನಮ್ಮ ಅಕ್ಕಿ ನಮ್ಮ ಅಕ್ಕಿ ಅಂತ ಹೇಳುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆಗೆ ಸ್ಪಷ್ಟ ರೂಪಕೊಟ್ಟು ಅನುಷ್ಠಾನ ಮಾಡಿದ್ದು ನರೇಂದ್ರ ಮೋದಿಯವರು ಎಂದು ಹೇಳಿದರು.

34 ರೂಪಾಯಿಗೆ ಅಕ್ಕಿ ಬರುವುದಿಲ್ಲ ಅದರಲ್ಲೂ ಹಣ ಉಳಿಸಿಕೊಳ್ಳಲು ಒದ್ದಾಟ ಮಾಡುತ್ತಿದ್ದೀರಿ. ದಯವಿಟ್ಟು ಕರ್ನಾಟಕದ ಜನವನ್ನು ತಪ್ಪು ಹಾದಿಗೆ ಎಳೆಯಬೇಡಿ. ಕೇಂದ್ರ ಸರಕಾರ ಕೊಡುವ ಅಕ್ಕಿ ಹೊರತುಪಡಿಸಿ 10 ಕೆಜಿ ಅಕ್ಕಿ ನೀಡಿ ಎಂದರು.

Key words: Money -instead – rice-former minister- Kota Srinivas Pujari