Wednesday, August 12, 2026

BDA Apartments

Home Front Page `ಯೂನಿವರ್ಸಿಟಿ ಆಫ್ ಎಮಿನೆನ್ಸ್’ ದರ್ಜೆಗೆ  6 ಸರ್ಕಾರಿ ವಿವಿ – ಸಚಿವ ಅಶ್ವತ್ ನಾರಾಯಣ್

`ಯೂನಿವರ್ಸಿಟಿ ಆಫ್ ಎಮಿನೆನ್ಸ್’ ದರ್ಜೆಗೆ  6 ಸರ್ಕಾರಿ ವಿವಿ – ಸಚಿವ ಅಶ್ವತ್ ನಾರಾಯಣ್

ಬೆಳಗಾವಿ,ಡಿಸೆಂಬರ್,22,2021(www.justkannada.in):  ರಾಜ್ಯದ ಆಯ್ದ 6 ಸರಕಾರಿ ವಿಶ್ವವಿದ್ಯಾಲಯಗಳನ್ನು `ಯೂನಿವರ್ಸಿಟಿ ಆಫ್ ಎಮಿನೆನ್ಸ್’ ಮಟ್ಟಕ್ಕೆ ಸುಧಾರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ರಾಣಿ ಚೆನ್ನಮ್ಮ ವಿ.ವಿ.ದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಬುಧವಾರದಂದು ಭೂಮಿಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ರಾಣಿ ಚೆನ್ನಮ್ಮ ವಿ.ವಿ.ಯಿಂದಾಗಿ ಬೆಳಗಾವಿ, ಬಾಗಲಕೋಟೆ ಮತ್ತು ಚಿಕ್ಕೋಡಿ ಭಾಗಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗಲಿದ್ದು, ಈ ವಿಶ್ವವಿದ್ಯಾಲಯವು ಕಿತ್ತೂರು ರಾಣಿ ಚೆನ್ನಮ್ಮನಂತೆಯೇ ಈ ಭಾಗಕ್ಕೆ ನಾಯಕತ್ವವನ್ನು ಒದಗಿಸಬೇಕು ಎಂದು ಆಶಿಸಿದರು.

ಸರಕಾರವು ಶಿಕ್ಷಣ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಗ್ರ ಬದಲಾವಣೆಯನ್ನು ತರಲು ಸಂಕಲ್ಪ ಮಾಡಿದ್ದು, ಈಗಾಗಲೇ 2,500 ತರಗತಿಗಳನ್ನು ಸ್ಮಾರ್ಟ್ ಕ್ಲಾಸ್ ರೂಂಗಳನ್ನಾಗಿ ಮಾಡಲಾಗಿದೆ. ಉಳಿದಿರುವ 6 ಸಾವಿರ ತರಗತಿಗಳನ್ನು ಕೂಡ ಇನ್ನು ಕೆಲವೇ ತಿಂಗಳುಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಮೂಲಕ ನಿರಂತರ ಕಲಿಕೆಯನ್ನು ತಮ್ಮದನ್ನಾಗಿಸಿಕೊಳ್ಳುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಇಷ್ಟೇ ಅಲ್ಲದೆ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಇದರಂತೆ, ರಾಜ್ಯದಲ್ಲಿ 7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಶಿಕ್ಷಣ ರಂಗದ ಸುಧಾರಣೆಗಾಗಿ ಸರಕಾರವು ಹಲವು ಅತ್ಯುಪಯುಕ್ತ ಕ್ರಮಗಳನ್ನು ಕೈಗೊಂಡಿವೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಕಿತ್ತೂರು ಕರ್ನಾಟಕ ಭಾಗದ ಮುಂಚೂಣಿ ಸಂಸ್ಥೆಯಾಗಿ ಬೆಳೆಯಬೇಕು. ಜತೆಗೆ ಸ್ಥಳಿಯ ಪರಿಸರಸ ಬೆಳವಣಿಗೆ, ಅಭಿವೃದ್ಧಿ ಮತ್ತು ಸುಧಾರಣೆಗೆ ಅಗತ್ಯವಾಗಿರುವ ಕಾರ್ಯಕ್ರಮ ಹಾಗೂ ಪರಿಕಲ್ಪನೆಗಳೊಂದಿಗೆ ಮುಂದಡಿ ಇಡಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎಂಎಲ್ಸಿ ಅರುಣ್ ಶಹಾಪುರ, ಕುಲಪತಿ ರಾಮಚಂದ್ರ ಗೌಡ ಮುಂತಾದವರು ಭಾಗವಹಿಸಿದ್ದರು.

ಜತೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ ಕವಟಗಿಮಠ, ಅರುಣ್ ಶಹಾಪುರ, ಹನುಮಂತ ನಿರಾಣಿ, ಚೆನ್ನರಾಜ ಹಟ್ಟಿಹೊಳಿ ಇದ್ದರು.

Key words: University –Eminence- grade –Minister-Ashwaththa Narayan