ಬೆಂಗಳೂರು:ಜೂ-16: ಲೋಕಸಭಾ ಚುನಾವಣೆ ಹೀನಾಯ ಸೋಲಿನಿಂದ ಕೆಂಗೆಟ್ಟಿರುವ ರಾಜ್ಯ ಕಾಂಗ್ರೆಸ್ಗೆ ಹೊಸ ರೂಪ ನೀಡಲು ರಾಜ್ಯ ಮುಖಂಡರು ನಿರ್ಧರಿಸಿದ್ದಾರೆ.
ಪಕ್ಷದಲ್ಲಿ ಕಾರ್ಯಕರ್ತರಿಗಿಂತ ನಾಯಕರೇ ಹೆಚ್ಚಾಗಿದ್ದು, ತಳಮಟ್ಟದಲ್ಲಿ ಸಂಘಟನೆ ಕುಸಿದು ಹೋಗಿದೆ. ಬ್ಲಾಕ್ ಮಟ್ಟದಿಂದ ಹಿಡಿದು ಕೆಪಿಸಿಸಿ ತನಕ ಮುಖಂಡರಲ್ಲಿ ಒಗ್ಗಟ್ಟಿಲ್ಲ. ಬಿಜೆಪಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವ ಕಾರ್ಯಕರ್ತರ ಪಡೆ ಇದೆ. ಅಂತಹ ತಂಡವನ್ನು ಕಟ್ಟುವುದು ಈಗ ಕಾಂಗ್ರೆಸ್ಗೆ ಅನಿವಾರ್ಯತೆ ಆಗಿದೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮನಗಂಡಿದ್ದಾರೆ.
ಅನೇಕ ಪದಾಧಿಕಾರಿಗಳ ಆಯ್ಕೆ ಮುಖಂಡರ ಶಿಫಾರಸಿನಂತೆ ಆಗಿದ್ದು, ಸ್ವಾರ್ಥಕ್ಕೆ ಹುದ್ದೆ ಬಳಸುತ್ತಿದ್ದಾರೆಯೇ ಹೊರತು ಸಂಘಟನೆಯಲ್ಲಿ ತೊಡಗುತ್ತಿಲ್ಲ. ಅನೇಕ ಬ್ಲಾಕ್ ಮತ್ತು ಜಿಲ್ಲಾಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಲಿಲ್ಲ. ಇದೆಲ್ಲವನ್ನೂ ಗಮನಿಸಿಯೇ ಪಕ್ಷದ ಮುಖಂಡರು ಸಮಗ್ರ ಬದಲಾವಣೆಯೊಂದಿಗೆ ಹೊಸ ರೂಪ ನೀಡಲು ನಿರ್ಧರಿಸಿದ್ದಾರೆ.
ಏನೇನು ಬದಲಾವಣೆ: ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳಲ್ಲಿ ಸಕ್ರಿಯರಾಗಿಲ್ಲದ ಅಧ್ಯಕ್ಷರನ್ನು ಕೂಡಲೇ ಬದಲಾವಣೆ ಮಾಡಿ, ಸಮರ್ಥವಾಗಿ ಸಂಘಟನೆ ಮಾಡುವವರಿಗೆ ಅವಕಾಶ ನೀಡಲಾಗುತ್ತದೆ. ಕೆಪಿಸಿಸಿ ಪದಾಧಿಕಾರಿಗಳನ್ನೂ ಬದಲಿಸಲು ನಿರ್ಧರಿಸಲಾಗಿದ್ದು, ಲೆಟರ್ಹೆಡ್ ಹಾಗೂ ವಿಸಿಟಿಂಗ್ ಕಾರ್ಡ್ಗೆ ಸೀಮಿತವಾಗಿರುವವರನ್ನು ಕಿತ್ತೆಸೆದು ಪಕ್ಷ ಕಟ್ಟುವವರಿಗೆ ಆದ್ಯತೆ ನೀಡಲಾಗುತ್ತದೆ.
ರಾಹುಲ್ ಜತೆ ಚರ್ಚೆ: ಸಂಪೂರ್ಣ ಬದಲಾವಣೆ ಯೊಂದಿಗೆ ಹೊಸದಾಗಿ ಪಕ್ಷ ಕಟ್ಟಲು ರಾಹುಲ್ಗಾಂಧಿ ಅವರೊಂದಿಗೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ರಾಹುಲ್ ವಿದೇಶಕ್ಕೆ ಹೋಗಲಿದ್ದು, ಅವರು ವಾಪಸು ಬಂದ ಕೂಡಲೇ ರಾಜ್ಯ ಮುಖಂಡರು ಸಮಾಲೋಚನೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಸಿಡಬ್ಲ್ಯೂಸಿ ಬದಲಾವಣೆ: ರಾಹುಲ್ ಸಿಡಬ್ಲ್ಯೂಸಿ ಪುನಾರಚನೆ ಮಾಡಲು ಉದ್ದೇಶಿಸಿದ್ದಾರೆ. ರಾಜ್ಯದಿಂದ ಈಗ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಅವಕಾಶ ಇದೆ. ಬಹುತೇಕ ಅವರಿಬ್ಬರು ಮುಂದುವರಿಯಬಹುದೆಂದು ಹೇಳಲಾಗುತ್ತಿದೆ.
ದಿನೇಶ್ ರಾಜೀನಾಮೆ ವದಂತಿ
ಕೆಪಿಸಿಸಿ ಮಾಧ್ಯಮ ವಿಭಾಗದ ವಾಟ್ಸ್ಆಪ್ ಗ್ರೂಪ್ನಿಂದ ಶುಕ್ರವಾರ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಕ್ಸಿಟ್ ಆಗಿದ್ದು, ಅವರ ರಾಜೀನಾಮೆ ವದಂತಿಗೆ ಕಾರಣವಾಯಿತು. ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತ್ಯನ್ ಪುತ್ತೂರು ಸ್ಪಷ್ಟನೆ ನೀಡಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕೃಪೆ:ವಿಜಯವಾಣಿ






