ಮೈಸೂರು,ಅಕ್ಟೋಬರ್,29,2026 (www.justkannada.i): ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮೈಸೂರು ರಾಜಮನೆತನದ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಜಿಲ್ಲಾ ಮಂತ್ರಿ ಇನ್ನಾದರೂ ಮೈಸೂರಿನ ಇತಿಹಾಸ ಓದಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ಮತ್ತು ಅವರ ಮಗ ಮೈಸೂರಿನ ಇತಿಹಾಸ ಗೊತ್ತಿಲ್ಲದವರಂತೆ ಮಾತನಾಡುತ್ತಿದ್ದಾರೆ. ಜಿಲ್ಲಾ ಮಂತ್ರಿ ಇನ್ನಾದರೂ ಮೈಸೂರಿನ ಇತಿಹಾಸ ಓದಬೇಕು. ಮೈಸೂರು ರಾಜಮನೆತನದ ಹಿನ್ನೆಲೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಯತೀಂದ್ರ ಸಿದ್ದರಾಮಯ್ಯಗೆ ಅನುಭವವಿಲ್ಲ. ಅನುಭವ ಇಲ್ಲದವರಿಗೆ ಜವಾಬ್ದಾರಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಚಾಮುಂಡೇಶ್ವರಿ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಬರುವಂತೆ ಮನವಿ ಮಾಡಿಕೊಂಡೆವು. ಅಂದು ಮಹಾರಾಜರು ಬರದೇ ಹೋಗಿದ್ದರೆ ಸಿದ್ದರಾಮಯ್ಯ ಗೆಲ್ಲಲು ಆಗುತ್ತಿರಲಿಲ್ಲ. ಸಿಎಂ ಕೂಡ ಆಗುತ್ತಿರಲಿಲ್ಲ. ಶ್ರೀಕಂಠದತ್ತರ ಬಗ್ಗೆಯೂ ಸಿದ್ದರಾಮಯ್ಯ ಒಳ್ಳೆಯ ಮಾತುಗಳನ್ನು ಆಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯತೀಂದ್ರ ಜಂಭದ ಕೋಳಿಯ ರೀತಿ ಮಾತನಾಡುವುದು ಶೋಭಾಯಮಾನವಲ್ಲ. ಈ ವಿಚಾರದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಸರಿಯಾಗಿ ಮಾತನಾಡಿದ್ದಾರೆ. ಈ ಬೆಳವಣಿಗೆಯಿಂದ ರಾಜಮನೆತನಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ ಎಂದರು.
ಬಾಂಬೆ ಡೇಸ್ ಪುಸ್ತಕ ಬಿಡುಗಡೆ ಮಾಡಲ್ಲ
ಹಾಗೆಯೇ ಬಾಂಬೆ ಡೇಸ್ ಪುಸ್ತಕವನ್ನ ನಾನು ಬಿಡುಗಡೆ ಮಾಡುವುದಿಲ್ಲ. ಪುಸ್ತಕವನ್ನ ನಾನು ಸಂಪೂರ್ಣವಾಗಿ ಬರೆದಿದ್ದೇನೆ. ಆದರೆ ಪ್ರಕಟ ಮಾಡದಿರಲು ನಿರ್ಧರಿಸಿದ್ದೇನೆ. ಪುಸ್ತಕ ಬಿಡುಗಡೆ ಮಾಡಿದರೆ ರಾಜಕಾರಣದ ಬಗ್ಗೆ ಜನ ಮತ್ತಷ್ಟು ಅಸಹ್ಯ ಪಟುಕೊಳ್ಳುತ್ತಾರೆ. ಈ ಕಾರಣದಿಂದ ಬಾಂಬೆ ಡೇಸ್ ಪುಸ್ತಕ ಬಿಡುಗಡೆ ಮಾಡುವುದಿಲ್ಲ ಈಗಲೇ ಜನ ರಾಜಕೀಯದ ಬಗ್ಗೆ ಬಹಳ ಅಸಹ್ಯ ಮಾಡಿಕೊಂಡಿದ್ದಾರೆ. ಇನ್ನಷ್ಟು ಅಸಹ್ಯ ಮಾಡಿಸುವುದಕ್ಕೆ ನನಗೆ ಇಷ್ಟ ಇಲ್ಲ ಎಂದರು.
2 ಪದವೀಧರ, 2 ಶಿಕ್ಷಕರ ಕ್ಷೇತ್ರಗಳ ಎಂಎಲ್ ಸಿ, ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ ಜಯಭೇರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ವಿಶ್ವನಾಥ್, ಈ ಚುನಾವಣೆಯಲ್ಲಿ ಪದವೀಧರರು, ಶಿಕ್ಷಕರು ಮಾತ್ರ ಮತ ಚಲಾಯಿಸಿದ್ದಾರೆ. ಆದರೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ವಿಜಯೇಂದ್ರ, ಅಶೋಕ್, ಕುಮಾರಸ್ವಾಮಿ 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಕೂಗಾಡುತ್ತಿದ್ದಾರೆ. ಆದರೆ ಪ್ರಧಾನಿ ಪ್ರತಿನಿಧಿಸುತ್ತಿರುವ ವಾರಣಾಸಿ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಅಲ್ಲಿ ಸಮಾಜವಾದಿ ಪಕ್ಷ ಗೆದ್ದಿದೆ ಎಂದು ಟಾಂಗ್ ಕೊಟ್ಟರು.







