ಮೈಸೂರು,ಅಕ್ಟೋಬರ್,25,2025 (www.justkannada.in): ನಾವು ಹಿಂದುಳಿದ ವರ್ಗದವರು ದಲಿತರು ಎಲ್ಲರೂ ಕೂಡ ಒಗ್ಗಟಾಗಿ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಸ್ವಾಗತ ಮಾಡಬೇಕು. ಸಾಮಾಜಿಕ, ಆರ್ಥಿಕವಾಗಿ ರಾಜಕೀಯವಾಗಿ ಬಲಗೊಳ್ಳಲು ಈ ಸಮೀಕ್ಷೆ ಅಗತ್ಯ. ನಾವು ಸಂವಿಧಾನ ನಮಗೆ ಕೊಟ್ಟಿರುವ ಹಕ್ಕನ್ನು ಪಡೆದುಕೊಳ್ಳಬೇಕು. ಸಮೀಕ್ಷೆ ವಿರೋಧ ಮಾಡೋರಿಗೆ ತಕ್ಕ ಉತ್ತರ ಕೊಡಬೇಕು ಎಂದು ಅಹಿಂದ ವರ್ಗಕ್ಕೆ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ಮೈಸೂರಿನ ಸೆನೆಟ್ ಸಭಾಂಗಣದಲ್ಲಿ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಭಾರತೀಯ ಸಾಮಾಜಿಕ ವ್ಯವಸ್ಥೆಗೆ ದೊಡ್ಡ ಪಿಡುಗು ಅಂದ್ರೆ ಜಾತಿ ವ್ಯವಸ್ಥೆ. ನಮಗೆ ಧರ್ಮ ಬದಲಾಯಿಸಲು ಅವಕಾಶ ಇದೆ. ಆದರೆ ಜಾತಿ ಬದಲಾಯಿಸಲು ಅವಕಾಶ ಇಲ್ಲ. ಇಂತಹ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ವರ್ಗ ಅಸಮಾನತೆ, ವರ್ಗ ತಾರತಮ್ಯ ಇದೆ. ಜಾತಿ ವ್ಯವಸ್ಥೆ ಅಷ್ಟು ಶೋಷಣೆ ಮಾಡೋ ವ್ಯವಸ್ಥೆ ಇನ್ನೊಂದು ಇಲ್ಲ. ಜಾತಿ ವ್ಯವಸ್ಥೆ ಹೋಗಬೇಕು. ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಬುದ್ಧ ಬಸವ ದಾಸರು ಜಾತಿ ವ್ಯವಸ್ಥೆ ಹೋಗಲಾಡಿಸಲು ಮುಂದಾಗಿದ್ರು. ಆದರೂ ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಿಂದ ನಾವು ಸ್ವಲ್ಪಮಟ್ಟಿಗೆ ಮುಂದೆ ಬಂದಿದ್ದೇವೆ. ಜಾತಿ ಮೂಲ ಇರೋದು ಧರ್ಮದಲ್ಲಿ. ಹಾಗಾಗಿ ಧರ್ಮ ಸುಧಾರಣೆ ಕೂಡ ಆಗ್ಬೇಕು. ಹಿಂದುಳಿದ ವರ್ಗ ಹಾಗೂ ದಲಿತರಿಗೆ ವಿಶೇಷವಾಗಿ ಸವಲತ್ತುಗಳನ್ನು ಕೊಡಬೇಕು. ಈ ವರ್ಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.
ಸಮೀಕ್ಷೆ ವರದಿಯನ್ನು ಪ್ರಬಲ ಜಾತಿಗಳು ವಿರೋಧಿಸುತ್ತಾ ಬಂದಿವೆ. ಮೈಸೂರು ಮಹಾರಾಜರು ಈ ಹಿಂದೆಯೇ ಮೀಸಲಾತಿ ಕೊಡಬೇಕು ಅಂತ ಹೇಳಿದ್ರು. ಜಾತಿ ಸಮೀಕ್ಷೆ ವಿರೋಧ ಮಾಡೋರು ಧರ್ಮ ಒಡೆಯುತ್ತಿದ್ದಾರೆ ಅಂತಾರೆ. ಜಾತಿಗಳ ವಿಭಜನೆ ಆಗಿ ಸಮಾಜ ಒಡೆಯುತ್ತಾರೆ ಅಂತಾರೆ. ಆ ರೀತಿ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಜಾತಿ ಸಮೀಕ್ಷೆ ಸಮಾಜದಲ್ಲಿ ಒಗ್ಗಟ್ಟು ಸೃಷ್ಟಿ ಮಾಡುವ ಕೆಲಸ ಮಾಡತ್ತೆ. ಕೇಂದ್ರ ಸಚಿವ ಸೋಮಣ್ಣ ಮೇಲ್ಜಾತಿ ತುಳಿಯುವ ಕೆಲಸ ಅಂದರು. .ಈ ರೀತಿಯ ಮೇಲು ಕೀಳು ಎಂಬುದು ಹೋಗಬೇಕು ಅನ್ನೋದಕ್ಕೆ ನಾವು ಸಮೀಕ್ಷೆ ಮಾಡೋದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆಗೆ ಕಿಡಿ ಕಾರಿದರು.
ಸುಧಾಮೂರ್ತಿ ನಾವು ಹಿಂದುಳಿದ ವರ್ಗಕ್ಕೆ ಸೇರಿಲ್ಲ ಅಂತಾರೆ. ತೇಜಸ್ವಿ ಸೂರ್ಯ ಸಮಾಜವನ್ನು ಮಿಸ್ ಲೀಡ್ ಮಾಡಿ ಸುಳ್ಳು ಹೇಳುತ್ತಾರೆ. ಇದು ಸಮುದಾಯಗಳ ಸಾಮಾಜಿಕ,ಶಿಕ್ಷಣಿಕ ಸಮೀಕ್ಷೆ. ಇದನ್ನು ಅರ್ಥ ಮಾಡಿಕೊಳ್ಳ ಬೇಕು. ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇದೆ
ಕೇಂದ್ರ ಸರ್ಕಾರ ಕೇವಲ ಜಾತಿಗಣತಿ ಮಾಡ್ತಿದ್ದಾರೆ. ನಾವು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡುತ್ತಿದ್ದೇವೆ. ಕೇಂದ್ರದ ಸಮೀಕ್ಷೆಯಿಂದ ನಂಬರ್ ಅಷ್ಟೇ ಸಿಗತ್ತೆ. ಯಾರು ಎಷ್ಟು ಹಿಂದುಳಿದಿದ್ದಾರೆ. ಅನ್ನೋದು ಈ ಸಮೀಕ್ಷೆಯಿಂದ ಗೊತ್ತಾಗತ್ತೆ. ಜನಸಂಖ್ಯೆ ಕಡಿಮೆ ಬಂದ್ರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
Key words: survey, MLC, Yathindra, Siddaramaiah







