ಎಸ್ ಐಆರ್ ಜಾರಿ ಮೂಲಕ ಸರ್ಕಾರ ಮೌನವಾಗಿ ಜನರ ಬೆನ್ನಿಗೆ ಇರಿದಿದೆ- ರಾಜಕೀಯ ವಿಶ್ಲೇಷಕ ಶಿವ ಸುಂದರ್

ಎಚ್, ಡಿ, ಕೋಟೆ,ಡಿಸೆಂಬರ್,19,2025 (www.justkannada.in):  ಎಸ್ ಐಆರ್ ಜಾರಿ ಮಾಡುವ ಮೂಲಕ  ಕೇಂದ್ರ ಸರ್ಕಾರ ಮೌನವಾಗಿ ಜನರ ಬೆನ್ನಿಗೆ ಇರಿದಿದೆ ಎಂದು ಮುಖ್ಯ ಚಿಂತಕ ಹಾಗೂ ರಾಜಕೀಯ ವಿಶ್ಲೇಷಕ ಶಿವಸುಂದರ್  ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಸಂರಕ್ಷಣಾ ಪಡೆ-ಕರ್ನಾಟಕ’ ಕೋಟೆ ಮತ್ತು ಸರಗೂರು ವತಿಯಿಂದ ‘ಸಂವಿಧಾನದ ಅಳಿವು-ಉಳಿವು ಸಂರಕ್ಷಣೆ’ ಕುರಿತಾಗಿ ನಡೆದ ಒಂದು ದಿನದ ಚಿಂತನ-ಮಂಥನ ಕಾರ್ಯಗಾರದಲ್ಲಿ ಮಾತನಾಡಿದ ಶಿವಸುಂದರ್, ದೇಶದಲ್ಲಿನ ಕೇಂದ್ರ, ರಾಜ್ಯ ಸರ್ಕಾರಗಳು ಒಂದಲ್ಲಾ ಒಂದು ರೀತಿಯಲ್ಲಿ ಜನ ಸಾಮಾನ್ಯರ ಬೆನ್ನಿಗೆ ಇರಿಯುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಸದ್ದಿಲ್ಲದೆ ಎಸ್ ಐಆರ್ ಹೆಸರಿನಲ್ಲಿ ಮತದಾನದ ಹಕ್ಕನ್ನೇ ಕಸಿಯುವ, ಒಂದು ಸಮುದಾಯವನ್ನು ನಿರ್ದಿಷ್ಟವಾಗಿ ಗುರಿಯಾಗಿಸಿ ನಾಗರಿಕತ್ವ ಇರದಂತೆ ಮಾಡುವ ಹುನ್ನಾರ ನಡೆಸಿದೆ. ಇನ್ನೊಂದೆಡೆ ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆ ಜೊತೆಗೆ ನಿರಂತರ ದಾಳಿ ನಡೆಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಳಿಕ ಜನಶಕ್ತಿ ರಾಜ್ಯಾದ್ಯಾಕ್ಷ ನೂರ್ ಶ್ರೀಧರ್ ಮಾತಾನಾಡಿ ಈ ದೇಶದ ಸಂವಿಧಾನ ಇಂದು ಅಪಾಯದಲ್ಲಿದೆ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತ ಹಲವಾರು ಕಾಯ್ದೆಗಳನ್ನ ಜಾರಿಗೆ ತಂದು  ಭಾವನಾತ್ಮಕವಾಗಿ ಜನರನ್ನ ಮರಳು ಮಾಡುವ ವ್ಯವಸ್ಥಿತ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಈ ದೇಶದ ಸಂವಿಧಾನದ ಚೌಕಟ್ಟಿನಲ್ಲಿ ನಾವು ಸಂವಿಧಾನ ಸಂರಕ್ಷಣೆ ಪಡೆಯ ಮೂಲಕ ತಳಮಟ್ಟದಿಂದ ಜನ ಸಂಘಟನೆ ಕಟ್ಟಬೇಕು ಅದಕ್ಕಾಗಿಯೇ ನಾವು ರಾಜ್ಯಾದ್ಯಂತ 1ಲಕ್ಷ ಕಾರ್ಯಕರ್ತರ ಪಡೆ ಕಟ್ಟಬೇಕಾಗಿದ್ದು ನಾವೆಲ್ಲರೂ ಈ ಅಭಿಯಾನದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಗಾರವನ್ನ ಕುರಿತಾಗಿ ಜೀವಿಕ ಸಂಸ್ಥಾಪಕ ಸಂಚಾಲಕ ಕಿರಣ್ ಕಮಲ್ ಪ್ರಸಾದ್, ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ ಸಬೀಹಾ ಭೂಮಿಗೌಡ, ಸಂಚಾಲನ ಸಮಿತಿ ಸದಸ್ಯ ಅಕ್ಬರ್ ಪಾಷ ಮತ್ತಿತರರು ಸಂವಿಧಾನ ಅಳಿವು ಉಳಿವು ಸಂರಕ್ಷಣೆ ವಿಷಯಗಳ ಮೇಲೆ ಮಾತಾನಾಡಿದರು.

ಕಾರ್ಯಗಾರದಲ್ಲಿ ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಎಲ್ಲಾ ಜಾತಿ ಜನಾಂಗ ಧರ್ಮ ಸಂಘ ಸಂಸ್ಥೆ ಸಂಘಟನೆ ವೇದಿಕೆ ಒಕ್ಕೂಟಗಳ ಅಧ್ಯಕ್ಷರು, ಸಂಚಾಲಕರು, ಯಜಮಾನರು ಸುಮಾರು 35ಕ್ಕೂ ಸಮುದಾಯಗಳು 40 ಕ್ಕೂ ಹೆಚ್ಚು ಸಂಘಟನೆ ಮುಖಂಡರು, ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತಿತರ ಜಿಲ್ಲೆಗಳಿಂದ ತಾಲ್ಲೂಕು ಮತ್ತು ಜಿಲ್ಲಾ ಮುಖಂಡರು ಪಾಲ್ಗೊಂಡಿದ್ದರು.

ವರದಿ

ತಿಮ್ಮರಾಜು,  ಹೆಚ್. ಡಿ ಕೋಟೆ

Key words: Workshop, Conservation, Constitution, HD Kote