ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ಅಗತ್ಯ- ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಮಾರ್ಚ್ 15,2022(www.justkannada.in): ಯಾವುದೇ ಸಮಾಜ ಅಭಿವೃದ್ಧಿ ಕಾಣಲು ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಎಫ್ ಕೆಸಿಸಿಐ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಸಚಿವ ಸುಧಾಕರ್, ಮಹಿಳೆ ಬಾಲ್ಯದಿಂದಲೇ ಹೋರಾಟವನ್ನು ಆರಂಭಿಸಬೇಕಾಗುತ್ತದೆ. ಕೆಲ ಸಂದರ್ಭದಲ್ಲಿ ಕುಟುಂಬದಲ್ಲೂ ಹಕ್ಕುಗಳಿಗಾಗಿ ಹೋರಾಟ, ಸಮಾಜದಲ್ಲಿ ಲಿಂಗ ಸಮಾನತೆಗಾಗಿ ಹೋರಾಟ, ಹೀಗೆ ಮಹಿಳೆಯ ಹೋರಾಟ ನಿರಂತರವಾಗಿರುತ್ತದೆ. ಆದರೆ ಯಾವುದೇ ಸಮಾಜ ಸಂಪೂರ್ಣ ಅಭಿವೃದ್ಧಿ ಕಾಣಬೇಕೆಂದರೆ ಮಹಿಳೆಯರಿಗೆ ಸಂಪೂರ್ಣ ಅವಕಾಶ, ಹಕ್ಕುಗಳನ್ನು ನೀಡಬೇಕಾಗುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ಬಚಾವೋ, ಭೇಟಿ ಪಡಾವೋ ಕಾರ್ಯಕ್ರಮ ಆರಂಭಿಸಿದರು. ಇದರ ಜೊತೆಗೆ ಭೇಟಾ ಸಮ್ಜಾವೋ ಎಂಬುದನ್ನೂ ಸೇರಿಸಲಾಯಿತು. ಇದು ಲಿಂಗ ಅಸಮಾನತೆ ನಿವಾರಿಸಲು ನೆರವಾಗಿದೆ. 2015-16 ರಲ್ಲಿ ಮಹಿಳೆಯರ ಸಂಖ್ಯೆ (1,000 ಪುರುಷರಿಗೆ) 840 ಇತ್ತು. 2020 ರಲ್ಲಿ ಈ ಸಂಖ್ಯೆ 1,040-1,050 ಆಗಿದೆ. ಅಂದರೆ ಈ ಐದು ವರ್ಷಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದು ದೇಶ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈಗ ರಾಜ್ಯದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಿದೆ. ಮಹಿಳಾ ನವೋದ್ಯಮಗಳು ಕಂಡುಬರುತ್ತಿದ್ದರೂ, ಅತಿ ಕಡಿಮೆ ಪ್ರಮಾಣದಲ್ಲಿವೆ. ಇದರಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ ಎಂದರು.

ಮಹಿಳೆಯರನ್ನು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ತರಲು ಉತ್ತಮ ಕಾರ್ಯಕ್ರಮ ರೂಪಿಸಬೇಕಿದೆ. ಆರೋಗ್ಯ ಇಲಾಖೆಯಲ್ಲೂ ಮಹಿಳಾ ಸಬಲೀಕರಣ ಮಾಡಲಾಗಿದೆ. ರಾಜ್ಯದಲ್ಲಿ 45 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಶುಶ್ರೂಷಕಿಯರು ಕೂಡ ರೋಗಿಗಳನ್ನು ತಮ್ಮ ಕುಟುಂಬದಂತೆ ಪರಿಗಣಿಸಿ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.

ಮಹಿಳೆಯರು ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕರ್ಮಶಕ್ತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಿಳೆಯರು ಉದ್ಯಮಕ್ಕೆ ಬರಲು ಪ್ರೋತ್ಸಾಹ ನೀಡುವುದು, ನಂತರ ಸೂಕ್ತ ಮಾಹಿತಿ ನೀಡುವುದು ಹಾಗೂ ಎಲ್ಲರೂ ಸೇರಿ ಅವರಿಗೆ ನೆರವು ನೀಡುವುದನ್ನು ಇದು ಒಳಗೊಂಡಿದೆ. ಉದ್ಯಮಗಳಲ್ಲಿ ಮಹಿಳೆಯರು ಮುಂಚೂಣಿಗೆ ಬರಲು ಇದೇ ಮೂರು ಪ್ರಮುಖ ಆಧಾರಗಳಾಗಿವೆ ಎಂದರು.

Key words: Women-industry -Minister -Dr. K. Sudhakar