ಮೈಸೂರು,ಅಕ್ಟೋಬರ್,28,2026 (www.justkannada.in): ಅಕ್ಟೋಬರ್ 23 ರಂದು ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ನಾಲ್ಕರಲ್ಲೂ ಎನ್.ಡಿ. ಎ ಅಭ್ಯರ್ಥಿಗಳು ಗೆದ್ದಿದ್ದಾರೆ. ಮುಂದಿನ ಬಾರಿ ರಾಜ್ಯದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಸಂಪೂರ್ಣ ನಂಬಿಕೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ಉಳಿಸಿ ಅರಾಜಕತೆಯನ್ನು ಅಳಿಸಿ ಎಂಬ ಶೀರ್ಷಿಕೆಯಡಿ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿವೈ ವಿಜಯೇಂದ್ರ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ 23 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಸೋಲಿಲ್ಲದ ಸರದಾರ ಅಂತ ಕಾಂಗ್ರೆಸ್ ಅಭ್ಯರ್ಥಿ ಮೆರೆಯುತ್ತಿದ್ದರು. ಅಂತವರನ್ನು 900ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ಬಿಜೆಪಿ ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೆ ನಾವು ಧನ್ಯವಾದ ಹೇಳುತ್ತೇನೆ ಎಂದರು.
ಈ ಫಲಿತಾಂಶ ನಾನಾ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ. ಗ್ಯಾರಂಟಿಗಳ ಭ್ರಮೆಯಲ್ಲಿರುವ ಸರ್ಕಾರವಿದು. ಅಧಿಕಾರಿದ ಅಮಲಿನಲ್ಲಿ ಕಾಂಗ್ರೆಸ್ ತೇಲುತ್ತಿದೆ. ನಾಡಿನ ರೈತರ ಜೊತೆ ಚೆಲ್ಲಾಟವಾಡಿ ಒಂದೇ ಒಂದು ಕೆಲಸ ಮಾಡಿಲ್ಲ. ಬರಗಾಲದ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ಉದೋಗ್ಯ ಕೊಡಲು ಆಗುತ್ತಿಲ್ಲ. ಮುಡಾ ಹಗರಣ, ವಾಲ್ಮೀಕಿ ಹಗರಣ. ಸಚಿವರ ರಾಜೀನಾಮೆ, ಇದು ಕಾಂಗ್ರೆಸ್ ಆಡಳಿತ. ನಾವು ಬಳ್ಳಾರಿ ಚಲೋ ಮಾಡಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ದೇವೆ. ನಮ್ಮ ಹೋರಾಟದ ಪರಿಣಾಮ ಜನರು ಈ ಬಾರಿ ಎನ್.ಡಿ. ಎ ಸರ್ಕಾರ ತರಲು ಚಿಂತನೆ ನಡೆಸಿದ್ದಾರೆ ಎಂದರು.
ಈ ಚುನಾವಣೆ ಫಲಿತಾಂಶ 120ರಿಂದ 130 ಕ್ಷೇತ್ರದ ಮತದಾರರು ಕೊಟ್ಟಿರುವ ತೀರ್ಪು. ಸಿಎಂ ಡಿಕೆ ಶಿವಕುಮಾರ್ ಕಪಟ ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕುವ ತೀರ್ಮಾನಕ್ಕೆ ಈಗಾಗಲೇ ಜನ ಬಂದಿದ್ದಾರೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಮೊದಲು ಅಧಿಕಾರ ಬಿಟ್ಟು ಹೋಗಿ ಎಂಬ ಸಂದೇಶ ಇದು. ಬಿಜೆಪಿಗೆ ಆಶೀರ್ವಾದ ಮಾಡಲು ಮತದಾರರು ರೆಡಿಯಾಗಿದ್ದಾರೆ. ಬಿಜೆಪಿಗೂ ಜನರು ಸಂದೇಶ ಕೊಟ್ಟಿದ್ದಾರೆ. ನಿಮ್ಮ ಸಣ್ಣಪುಟ್ಟ ಗೊಂದಲ ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಹೋಗಿ ಎಂಬ ಸಂದೇಶ ಕೊಟ್ಟಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರಿಗೂ ಈ ಚುನಾವಣೆ ಸ್ಪಷ್ಟ ಸಂದೇಶ
ಪ್ರಧಾನಿಯಾಗುವ ಆಸೆಗೆ ರಾಹುಲ್ ಗಾಂಧಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದಾರೆ. ಈ ಚುನಾವಣೆ ಅವರಿಗೂ ಸ್ಪಷ್ಟ ಸಂದೇಶ ನೀಡಿದೆ. ಬ್ಯಾಲೆಟ್ ಪೇಪರ್ ಬಳಸಿ ಮಾಡಿದಂತಹ ಈ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಗೆ ಯಾವುದರ ಮೇಲೂ ನಂಬಿಕೆ ಇಲ್ಲ. ಈ ಫಲಿತಾಂಶವನ್ನು ಸಿಎಂ ಡಿಕೆಶಿ ರಾಹುಲ್ ಗಾಂಧಿಗೆ ತಲುಪಿಸಬೇಕು. ನಮಗೆ ಸಂಪೂರ್ಣ ನಂಬಿಕೆಯಿದೆ. ಮುಂದಿನ ಬಾರಿ ಎನ್ ಡಿ. ಎ ಸರ್ಕಾರ ರಾಜ್ಯದಲ್ಲಿ ಬರುತ್ತದೆ ಎಂದು. ಇದನ್ನು ತಡೆಯಲು ಯಾರಿಂದಲೂ ಯಾವ ಕೆಟ್ಟಶಕ್ತಿಗಳಿಗೂ ಇಲ್ಲ ಎಂದು ನುಡಿದರು.
ರಾಜ್ಯದಲ್ಲಿ ಬರವಿದ್ದು, ಸರ್ಕಾರ ಪರಿಹಾರ ಘೋಷಣೆ ಮಾಡಿದರು. ಆದರೆ ಅದು ಘೋಷಣೆಯಾಗಿ ಉಳಿಯಿತು. ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಡುತ್ತಾರೆಅಂತ ಜನ ಕಾಯುತ್ತಿದ್ದರು. ವಿಶೇಷ ವಿಮಾನದಲ್ಲಿ ಸಿಎಂ ಹೋದರು.. ನನ್ನನ್ನು ಕ್ಷಮಿಸಿ ಬೊಕ್ಕಸದಲ್ಲಿ ಹಣ ಇಲ್ಲ. ನಮಗೆ ಸಮಯ ಕೊಡಿ ಅಂತ ಸಿಎಂ ಹೇಳಿದರು. ಇದು ನಾಚಿಕೆಗೇಡು. ಇದನ್ನು ಹೇಳಲು ಬೆಳಗಾವಿಗೆ ವಿಶೇಷ ವಿಮಾನದಲ್ಲಿ ಹೋಗಬೇಕಿತ್ತಾ? ಎಂದು ಸಿಎಂ ಡಿಕೆ ಶಿವಕುಮಾರ್ ಗೆ ಬಿವೈ ವಿಜಯೇಂದ್ರ ಕುಟುಕಿದರು.
ಕಬ್ಬಿನಿಂದ ರಾಜ್ಯಕ್ಕೆ ದೊಡ್ಡ ಆದಾಯ ಬರುತ್ತಿದೆ. ಕಬ್ಬಿನ ಉಪ ಉತ್ಪನ್ನಗಳಿಂದ ಲಾಭ ಬರುತ್ತಿದೆ. ಪ್ರತಿ ಟನ್ ಕಬ್ಬಿಗೆ 9,234 ರೂಪಾಯಿ ರಾಜ್ಯ ಸರ್ಕಾರಕ್ಕೆ ಬರುತ್ತದೆ. ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ 15 ಸಾವಿರ ಕೋಟಿ ಆದಾಯ ಕಬ್ಬಿನಿಂದ ಬರುತ್ತಿದೆ . ಕಬ್ಬು ಬೆಳೆಗಾರರ ಪರವಾಗಿ ನಾನು ಸಿಎಂಗೆ ಮನವಿ ಮಾಡುತ್ತೇವೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬಿಡಿ. ರೈತರಿಗೆ 500 ರೂಪಾಯಿ ಪ್ರೋತ್ಸಾಹ ಧನ ನೀಡಿ. ರೈತರ ಜೀವನದ ಜೊತೆ ಚೆಲ್ಲಾಟ ಆಡೋದು ಬಿಡಿ. ರೈತರ ರಕ್ಷಿಸುವ ಕಬ್ಬು ಬೆಳೆಗಾರರ ಹಿತಕಾಯುವ ಕೆಲಸ ಮಾಡಿ ಎಂದು ಸಿಎಂ ಡಿಕೆ ಶಿವಕುಮಾರ್ ಗೆ ವಿಜಯೇಂದ್ರ ಸಲಹೆ ನೀಡಿದರು.






