ಶ್ರೀರಾಮ ಏನು ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ..? ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ.

ಬೆಂಗಳೂರು, ಜನವರಿ 23,2024(www.justkannada.in):  ಅಯೋಧ್ಯೆ ಶ್ರೀರಾಮನ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ.  ಶ್ರೀರಾಮ ಏನು ಬಿಜೆಪಿಯವರ ಅಪ್ಪನ ಮನೆ ಆಸ್ತಿಯಾ ಎಂದು  ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,  ರಾಜಕಾರಣದಲ್ಲಿ ಧರ್ಮವಿರಲಿ. ಆದರೆ ಧರ್ಮದಲ್ಲಿ ರಾಜಕಾರಣ ಬೇಡ.   ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ನನ್ನ ಹೆಸರಲ್ಲಿ ಶಿವನ ಮಗ ಕುಮಾರನೂ ಇದ್ದಾನೆ. ಬಿಕೆ ಹರಿ ಪ್ರಸಾದ್ ಹೆಸರಲ್ಲಿ ಹರಿ ಇದ್ದಾನೆ. ಬಿಜೆಪಿಯವರಿಗೆ ಹೊಟ್ಟೆ ಉರಿ ಎಂದು ಹರಿಹಾಯ್ದರು.

ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ. ದೇಗುಲಗಳಲ್ಲಿ ಪೂಜೆ ಮಾಡುವಂತೆ ನಾವು ಆದೇಶ ಮಾಡಿಲ್ವಾ? ಮುಜರಾಯಿ ಇಲಾಖೆ ದೇಗುಲಗಳಿಗೆ ಆದೇಶಿಸಿಲ್ವಾ? ರಾಮನನ್ನೂ ಪೂಜಿಸುತ್ತೇವೆ, ಸೀತೆಯನ್ನೂ ಪೂಜಿಸುತ್ತೇವೆ ಡಿ.ಕೆ ಶಿವಕುಮಾರ್ ತಿಳಿಸಿದರು.

ರಾಹುಲ್ ಗಾಂಧಿ ಭಾರತ್ ನ್ಯಾಯ ಯಾತ್ರೆಗೆ ತಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್,  ದೇಶದ ಜನರ ಹೃದಯ ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಜೋಡೋ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ದೇಶದ ನ್ಯಾಯಕ್ಕಾಗಿ ರಾಹುಲ್​ 2ನೇ ಹಂತದ ಯಾತ್ರೆ ಮಾಡುತ್ತಿದ್ದಾರೆ. ಇದೊಂದು ಮಾದರಿ ಹಾಗೂ ಐತಿಹಾಸಿಕವಾಗಿದೆ ರಾಹುಲ್ ಗಾಂಧಿ ಅವರನ್ನು ಅಸ್ಸಾಂನ ಗುವಾಹಟಿ ನಗರಕ್ಕೆ ಪ್ರವೇಶಿಸಲು ಪೊಲೀಸರು ಬಿಡುತ್ತಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಬದುಕಿದೆಯಾ? ರಾಹುಲ್ ಗಾಂಧಿ ಪಾದಯಾತ್ರೆಯಿಂದ ಬಿಜೆಪಿಯವರಿಗೆ ಭಯ ಎಂದು ಗುಡುಗಿದರು.

Key words: What – Shriram -BJP’s – property..? -DCM -DK Shivakumar