ರಾಜ್ಯದಲ್ಲಿ ಜಲಕ್ಷಾಮದ ಸೂತಕ, ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಉತ್ಸವ-ಆರ್.ಅಶೋಕ್ ಟೀಕೆ.

ಬೆಂಗಳೂರು,ಮಾರ್ಚ್,11,2024(www.justkannada.in): ರಾಜ್ಯದಲ್ಲಿ ಜಲಕ್ಷಾಮದ ಸೂತಕವಿದ್ದರೇ ಇತ್ತ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರೆಂಟಿ ಉತ್ಸವ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಈ ಸಂಬಂಧ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆ ಎಂಬಂತೆ ಇಲ್ಲಿ ಜನ ಜಲಕ್ಷಾಮದಿಂದ ಹನಿ ನೀರಿಗೂ ಹಾಹಾಕಾರ ಪಡುತ್ತಿದ್ದರೆ, ಅತ್ತ ಸಿಎಂ ಸಿದ್ದರಾಮಯ್ಯನವರು ಗ್ಯಾರೆಂಟಿ ಸಮಾವೇಶದ ಹೆಸರಿನಲ್ಲಿ ಜನರ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ 900 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಲಕ್ಷಾಂತರ ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಊರು ಬಿಟ್ಟು ಗುಳೇ ಹೋಗಿದ್ದಾರೆ, 40ಕ್ಕೂ ಹೆಚ್ಚು ನೇಕಾರರು ದಿಕ್ಕು ಕಾಣದೆ ಜೀವ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಜನ ತೊಟ್ಟು ನೀರಿಗೂ ಪರದಾಡುತ್ತಿದ್ದಾರೆ.

ರಾಜ್ಯದಲ್ಲಿ ಇಂತಹ ಸೂತಕದ ವಾತಾವರಣ ಇರುವಾಗ ಗ್ಯಾರೆಂಟಿ ಸಮಾವೇಶದ ಹೆಸರಿನಲ್ಲಿ ಪ್ರತಿ ತಾಲೂಕಿಗೆ 50 ಲಕ್ಷ, ಪ್ರತಿ ಜಿಲ್ಲೆಗೆ ಒಂದು ಕೋಟಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮಗಳಿಗೆ ಎರಡು ಕೋಟಿ ಖರ್ಚು ಮಾಡಿ ಉತ್ಸವ ಮಾಡುತ್ತಿದೀರಲ್ಲ ಸಿಎಂ ಸಿದ್ದರಾಮಯ್ಯ ನವರೇ, ನಿಮಗೆ ಕಿಂಚಿತ್ತಾದರೂ ಮಾನವೀಯತೆ, ಕರ್ತವ್ಯ ಪ್ರಜ್ಞೆ ಇದೆಯೇ? ಎಂದು ಆರ್.ಅಶೋಕ್ ಪ್ರಶ್ನಿಸಿದರು.

ಗ್ಯಾರೆಂಟಿ ಸಮಾವೇಶಕ್ಕಾಗಿ ನೂರಾರು ಕೋಟಿ ಪೋಲು ಮಾಡುವ ಬದಲು ಜನರಿಗೆ ನೀರಿನ ವ್ಯವಸ್ಥೆ ಮಾಡಬಹುದಿತ್ತಲ್ಲ? ಅದೇ ದುಡ್ಡಿನಲ್ಲಿ ರೈತರಿಗೆ ಬರ ಪರಿಹಾರ ಕೂಡಬಹುದಿತ್ತಲ್ಲವೆ? ರಾಜ್ಯದ ಜನತೆ ಇಲ್ಲಿ ಅವಸ್ಥೆ ಪಡುತ್ತಿದ್ದರೆ ನಿಮಗೆ ಚುನಾವಣಾ ಪ್ರಚಾರವೇ ಹೆಚ್ಚಾಗಿ ಹೋಯಿತೇ? ಎಂದು ಆರ್.ಅಶೋಕ್ ಗುಡುಗಿದ್ದಾರೆ.

Key words: water -scarcity – state-guarantee- festival -Congress government-R.Ashok