ಮಳೆ ನೀರು ಕೊಯ್ಲಿನಿಂದ ಟ್ಯಾಂಕರ್‌ ನೀರಿಗೆ ಬ್ರೇಕ್‌

ಬೆಂಗಳೂರು:ಜುಲೈ-6: ವಲಗೇರಹಳ್ಳಿಯ ಪಯೊನೀರ್‌ ಎವಾಕ್ಯು ಅಪಾರ್ಟ್‌ಮೆಂಟ್‌ನಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಯಿಂದ ಖಾಸಗಿ ಟ್ಯಾಂಕರ್‌ ಅವಲಂಬನೆ ಕಡಿಮೆಯಾಗಿದೆ.

ವಲಗೇರಹಳ್ಳಿಯ ವಿವೇಕಾನಂದ ಬಡಾವಣೆಯ 28 ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್‌ ನಿರ್ಮಾಣವಾಗಿ ಐದು ವರ್ಷವಾಗಿದೆ. 28 ಕುಟುಂಬಗಳ ಅಗತ್ಯ ನೀಗಿಸಲು ಒಂದೇ ಒಂದು ಬೋರ್‌ವೆಲ್‌ ಇದೆ. ಒಂದು ವರ್ಷದಿಂದ ಬೋರ್‌ವೆಲ್‌ ನೀರು ಕಡಿಮೆಯಾಗಿದ್ದರಿಂದ ನಿವಾಸಿಗಳು ಪ್ರತಿ ದಿನ 1 ಸಾವಿರ ರೂ. ತೆತ್ತು 6 ಸಾವಿರ ಲೀಟರ್‌ನ ಎರಡು ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತಿದ್ದರು. ಮೂರು ತಿಂಗಳ ಹಿಂದೆ ಮಳೆ ಕೊಯ್ಲು ಅಳವಡಿಸಿದ್ದರಿಂದ ಪ್ರತಿ ದಿನ ಟ್ಯಾಂಕರ್‌ ನೀರು ಖರೀದಿಸುವ ಹೊರೆ ತಪ್ಪಿದೆ.

ಈ ಭಾಗದಲ್ಲಿ ಕಾವೇರಿ ಕೊಳವೆ ಜಾಲವಿದ್ದರೂ ಸಂಪರ್ಕ ಕಲ್ಪಿಸಿಕೊಂಡಿಲ್ಲ. ಬೋರ್‌ವೆಲ್‌ ಮೂಲದಿಂದ ಕುಡಿಯುವ ಹಾಗೂ ಶೌಚಾಲಯಕ್ಕೆ ಬಳಸುವ ನೀರು ಲಭ್ಯವಾಗಬಹುದು ಎಂದು ಅಂದಾಜಿಸಲಾಗಿತ್ತು. ಕ್ರಮೇಣ ಅಂತರ್ಜಲ ಮಟ್ಟ ಕುಸಿಯುತ್ತಿದ್ದಂತೆ ನಿವಾಸಿಗಳು ಟ್ಯಾಂಕರ್‌ ನೀರಿನ ಮೊರೆ ಹೋದರು. ಪ್ರತಿ ದಿನ 1 ಸಾವಿರ ರೂ. ನೀಡಿ ನೀರು ಪಡೆಯುವುದು ದೊಡ್ಡ ಹೊರೆಯಾಗಿ ಪರಿಣಮಿಸಿತ್ತು. ಮಳೆಗಾಲದಲ್ಲಿ ಮಾತ್ರ ಬೋರ್‌ವೆಲ್‌ ನೀರು ಹೆಚ್ಚು ದೊರೆತು ಟ್ಯಾಂಕರ್‌ ಬಳಕೆ ಕಡಿಮೆಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.

ಅಪಾರ್ಟ್‌ಮೆಂಟ್‌ಗೆ ಈಗ ಕಾವೇರಿ ನೀರಿನ ಸಂಪರ್ಕ ಪಡೆಯಲು ಜಲಮಂಡಳಿಗೆ ಅರ್ಜಿ ಸಲ್ಲಿಸಲಾಗಿದೆ. ಕೊಯ್ಲು ವ್ಯವಸ್ಥೆ ಇರುವುದರಿಂದ ಸಂಪರ್ಕ ನೀಡಲು ಜಲಮಂಡಳಿ ಒಪ್ಪಿದೆ. ಕಾವೇರಿ ನೀರು ದೊರೆತರೂ ಮಳೆ ನೀರನ್ನೇ ಬಳಸುತ್ತೇವೆ ಎಂದು ನಿವಾಸಿಗಳು ಹೇಳುತ್ತಾರೆ. ಯಾವುದೇ ತಂತ್ರಜ್ಞರ ಸಹಾಯ ಪಡೆಯದೆ 73 ಸಾವಿರ ರೂ. ಖರ್ಚು ಮಾಡಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ನಿವಾಸಿಗಳೇ ಮಾಡಿಕೊಂಡಿದ್ದಾರೆ.

1-2 ಲಕ್ಷ ಲೀಟರ್‌ ಮಳೆ ನೀರು ಸಂಗ್ರಹ

ಅಪಾರ್ಟ್‌ಮೆಂಟ್‌ನ ಪ್ರತಿ ಫ್ಲ್ಯಾಟ್‌ಗೆ ತಿಂಗಳಿಗೆ ಸುಮಾರು 12 ಸಾವಿರ ಲೀಟರ್‌ ನೀರು ಬೇಕಿದೆ. ತಲಾ 30 ಸಾವಿರ ಲೀಟರ್‌ ಸಾಮರ್ಥ್ಯ‌ದ ಎರಡು ಸಂಪ್‌ಗಳನ್ನು ನಿರ್ಮಿಸಲಾಗಿದೆ. ಮೊದಲು ಇದಕ್ಕೆ ಬೋರ್‌ವೆಲ್‌ನಿಂದ ಪಂಪ್‌ ಮಾಡಿದ ನೀರನ್ನು ತುಂಬಿಸಲಾಗುತ್ತಿತ್ತು. ಕೊಯ್ಲು ಅಳವಡಿಕೆ ನಂತರ ಏಪ್ರಿಲ್‌, ಮೇನಲ್ಲಿ ಸುರಿದ ಮಳೆಗೆ 1-2 ಲಕ್ಷ ಲೀಟರ್‌ ಮಳೆ ನೀರು ಸಂಪ್‌ನಲ್ಲಿ ಸಂಗ್ರಹವಾಗಿದೆ. ಇಂಗು ಗುಂಡಿ ನಿರ್ಮಿಸಿದ ಬಳಿಕ ಬೋರ್‌ವೆಲ್‌ನಿಂದಲೂ ಹೆಚ್ಚು ನೀರು ಸಿಕ್ಕಿದೆ. ಇದನ್ನೇ ಹಲವು ದಿನಗಳವರೆಗೆ ನಿವಾಸಿಗಳು ಬಳಸಿದ್ದಾರೆ. ಇದರಿಂದಾಗಿ ವಾರಕ್ಕೆ ಒಮ್ಮೆ ಟ್ಯಾಂಕರ್‌ ನೀರು ತರಿಸುವ ಮಟ್ಟಿಗೆ ಬದಲಾವಣೆಯಾಗಿದೆ. ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆ ಬಂದರೆ ಟ್ಯಾಂಕರ್‌ಗೆ ಖರ್ಚು ಮಾಡುವ ಹೊರೆ ಇನ್ನೂ ಕಡಿಮೆಯಾಗಬಹುದು ಎಂಬುದು ನಿವಾಸಿಗಳ ನಿರೀಕ್ಷೆಯಾಗಿದೆ.

ಮಳೆ ನೀರು ಕೊಯ್ಲು ವ್ಯವಸ್ಥೆಯಲ್ಲಿ ಮೂರು ಫಿಲ್ಟರ್‌ ಅಳವಡಿಸಿದ್ದೇವೆ. ಹೀಗಾಗಿ ಸಂಗ್ರಹವಾದ ಮಳೆ ನೀರು ಕುಡಿಯಲು ಯೋಗ್ಯವಾಗಿದೆ. ಮೊದಲು ಬೋರ್‌ವೆಲ್‌ ಬಿಟ್ಟರೆ ಟ್ಯಾಂಕರ್‌ ನೀರೇ ಆಧಾರವಾಗಿತ್ತು. ಕೊಯ್ಲು ಅಳವಡಿಕೆ ನಂತರ ಹೆಚ್ಚುವರಿ ನೀರು ದೊರೆತಿದೆ.

ದಯಾನಂದ, ನಿವಾಸಿ

ಪಯೊನೀರ್‌ ಎವಾಕ್ಯು ಅಪಾರ್ಟ್‌ಮೆಂಟ್‌
ಕೃಪೆ:ವಿಜಯಕರ್ನಾಟಕ

ಮಳೆ ನೀರು ಕೊಯ್ಲಿನಿಂದ ಟ್ಯಾಂಕರ್‌ ನೀರಿಗೆ ಬ್ರೇಕ್‌
water-from-rain-water-harvesting-break-to-tanker-water