ಬೆಂಗಳೂರು,ಅಕ್ಟೋಬರ್,15,2026 (www.justkannada.in): ಎಂಜಿನಿಯರಿಂಗ್ ಕೋರ್ಸ್ ಜತೆಗೆ ಅವಶ್ಯವಿರುವ ಪ್ರಾಯೋಗಿಕ ತರಬೇತಿಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ವಿಶ್ವಭಾರತ್ ಸ್ಕಿಲ್ ಇನ್ಸ್ಟಿಟ್ಯೂಟ್(ವಿಬಿಎಸ್ಐ) ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಗುರುವಾರ ಬೆಂಗಳೂರಿನ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಈ ಒಪ್ಪಂದಕ್ಕೆ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ವಿಶ್ವಭಾರತ್ ಸ್ಕಿಲ್ ಇನ್ಸ್ಟಿಟ್ಯೂಟ್ನ (ವಿಬಿಎಸ್ಐ) ನಿರ್ದೇಶಕರಾದ ಎಫ್.ಆರ್.ಸಿಂಘ್ವಿ ನಿಯೋಗ ಸಹಿ ಹಾಕಿತು.
ವಿದ್ಯಾರ್ಥಿಗಳಿಗೆ ಕೈಗಾರಿಕೆ ಬಯಸುವ ರೀತಿಯಲ್ಲಿ ಉನ್ನತ ಕೌಶಲ್ಯವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಅಡ್ವಾನ್ಸ್ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ(ಎಐ), ಮಷಿನ್ ಲರ್ನಿಂಗ್(ಎಂಎಲ್), ಡೇಟಾ ಅನಾಲಿಟಿಕ್ಸ್, ಕ್ಲೌಡ್ ಮತ್ತು ಮೂಲ ಸೌಕರ್ಯ, ಐಟಿ ಮೂಲ ಸೌಕರ್ಯ ನಿರ್ವಹಣೆ, ಕ್ಲೌಡ್ ಕಂಪ್ಯೂಟಿಂಗ್, ದತ್ತಾಂಶ ಕೇಂದ್ರ ತಂತ್ರಜ್ಞಾನ, ಸೈಬರ್ ಸೆಕ್ಯೂರಿಟಿ, ಹೆಲ್ತ್ ಕೇರ್ ಮತ್ತು ಮೆಡಿಕಲ್ ಟೆಕ್ನಾಲಜಿ, ಇಂಡಸ್ಟ್ರಿ, ಆಟೋಮಿಷನ್ ಮತ್ತು ಮೆಕಟ್ರಾನಿಕ್ಸ್, ಡಿಜಿಟಲ್ ಮೀಡಿಯಾ ಮತ್ತು ಫುಲ್ ಸ್ಟಾಕ್ ಡೆವಲೆಪ್ಮೆಂಟ್, ಆನಿಮೇಷನ್, ಗೇಮ್ ಡೆವಲಪರ್, ಜಿಐಎಸ್ ಡ್ರೋನ್ಸ್, ನವೀಕರಿಸಬಹುದಾದ ಇಂಧನ, ಎಲೆಟ್ರಿಕ್ ವೆಹಿಕಲ್ ಹೀಗೆ ಹಲವು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದೆ.
ಈ ಕುರಿತು ಮಾತನಾಡಿದ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, “ವಿದ್ಯಾರ್ಥಿಗಳಿಗೆ ಕೈಗಾರಿಕೆಗಳು ಬಯಸುವ ರೀತಿಯಲ್ಲಿ ತರಬೇತಿ ನೀಡುವ ಉದ್ದೇಶದಿಂದ ವಿಶ್ವಭಾರತ್ ಕಂಪನಿಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಮೂರು ಸಾವಿರ ವಿದ್ಯಾರ್ಥಿಗಳಿಗೆ ಹ್ಯಾಂಡ್ಸ್ ಆನ್ ಎಕ್ಸ್ ಪಿರಿಯನ್ಸ್ ನೀಡುತ್ತೇವೆ. 100ಕ್ಕೂ ಹೆಚ್ಚಿನ ಉದ್ಯಮ ತಜ್ಞರು ಸ್ವಯಂ ಪ್ರೇರಿತವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಪ್ರಮುಖವಾಗಿ ಉದ್ಯೋಗ ಭರವಸೆಯನ್ನು ಕಂಪನಿಯು ನೀಡಿದೆ.” ಎಂದರು.
ಈ ವೇಳೆ ವಿಟಿಯು ಕುಲಸಚಿವರಾದ ಪ್ರೊ.ಪ್ರಸಾದ ಬಿ.ರಾಂಪುರೆ, ಪ್ರೊ.ಯು.ಜೆ.ಉಜ್ವಲ್, ಉದ್ಯಮಿ ಎಂ.ಆರ್.ನರಸಿಂಹಮೂರ್ತಿ, ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕರಾದ ಡಾ.ಅಜಿತ್ ಪದ್ಯಾಣ ಇತರರು ಇದ್ದರು.






