ಎಸ್ಎಂ ಕೃಷ್ಣ ಅವರಿಂದ ದಸರಾ ಹಬ್ಬದ ಶಿಷ್ಟಾಚಾರ ಉಲ್ಲಂಘನೆ- ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆರೋಪ.

ಮೈಸೂರು,ಅಕ್ಟೋಬರ್,7,2021(www.justkannada.in): ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಹಿರಿಯ ರಾಜಕೀಯ ಮುತ್ಸದ್ಧಿ ಎಸ್ಎಂ ಕೃಷ್ಣ ಅವರ ಸಂದೇಶ ದಸರಾ ಹಬ್ಬದ ಶಿಷ್ಟಾಚಾರವನ್ನು ಉಲ್ಲಂಘಿಸಿದಂತೆ ಆಗಿದೆ ಎಂದು ಕೆಪಿಸಿಸಿ ವಕ್ತಾರರ ಎಚ್.ಎ. ವೆಂಕಟೇಶ್ ಆರೋಪ. ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಎಸ್ಎಂ ಕೃಷ್ಣ ಅವರನ್ನು ಚಿಕ್ಕವಯಸ್ಸಿನಿಂದ ಅನುಕರಣೆ ಮಾಡಿಕೊಂಡು ಬಂದ ನನಗೆ ಅವರ ಹೇಳಿಕೆ ದಿಗ್ಭ್ರಮೆ ಮೂಡಿಸಿದೆ. 55 ವರ್ಷಗಳ ಕಾಲ ತಮ್ಮ ರಾಜಕೀಯ ಅನುಭವ ಪ್ರಸ್ತಾಪಿಸಿ ದೇಶದ ಯಾವುದೇ ಜನಪ್ರತಿನಿಧಿಗಳ ಆಡಳಿತಕ್ಕಿಂತ ಮೋದಿಯವರ ಆಡಳಿತವನ್ನು ಹೋಲಿಕೆ ಮಾಡಿ ಪ್ರಶಂಸಿಸಿ ಮಾತನಾಡಿರುವುದು ಸರಿಯಾದ ಕ್ರಮವಲ್ಲ. ದಸರಾ ಇತಿಹಾಸದಲ್ಲಿಯೇ ಪ್ರಥಮ ಬಾರಿ ರಾಜಕಾರಣಿಯೊಬ್ಬರಿಗೆ ಸಿಕ್ಕಿದ ಸದಾವಕಾಶವನ್ನು ಎಸ್ ಎಂ ಕೃಷ್ಣ ಅವರು ಮೋದಿ ಹೊಗಳಲು ಬಳಸಿಕೊಂಡಿದ್ದು ನಾಡಿನ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಟೀಕಿಸಿದರು.

ರೈತರ ಮಗನಾಗಿ ಎಸ್ ಎಂ ಕೃಷ್ಣ ಅವರು ಒಂದು ಕ್ಷಣ ಉತ್ತರಪ್ರದೇಶದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳ ಬೇಕಾಗಿತ್ತು. ದೇಶದ ಲಕ್ಷಾಂತರ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿದಾಗ ಸೌಜನ್ಯಕ್ಕಾದರೂ ಭೇಟಿ  ಮಾಡಲಿಲ್ಲ. ಕಾರು ಬಿಟ್ಟು ರೈತರನ್ನು ಸಾಯಿಸಿದಾಗ ಸಾಂತ್ವನ ಹೇಳದ ಪ್ರಧಾನಿಯವರ ಆಡಳಿತವನ್ನು ಪ್ರಶಂಸೆ ಮಾಡಿರುವುದು ನಿಜಕ್ಕೂ ದುರಂತ. ಸಾಮಾನ್ಯ ವರ್ಗದ ಜನ ಅಗತ್ಯವಸ್ತುಗಳನ್ನು ಕೊಂಡುಕೊಂಡು ಜೀವನ ಮಾಡುವ ಸ್ಥಿತಿಯಲ್ಲಿಲ್ಲ. ಪೆಟ್ರೋಲ್, ಡೀಸೆಲ್, ಅನಿಲ ಬೆಲೆಗಳು ಪ್ರತಿದಿನವೂ ಹೆಚ್ಚುತ್ತಿದ್ದು ಬಡವರ ಸ್ಥಿತಿ ಮೋದಿಯವರ ಸರ್ಕಾರದಲ್ಲಿ ದುರ್ಲಭ ಗೊಂಡಿದೆ.

ದಸರಾ ಹಬ್ಬದ ಪ್ರಾರಂಭದಲ್ಲೇ ಬಿಜೆಪಿ ನಾಡಹಬ್ಬದಲ್ಲಿ ಕನ್ನಡನಾಡಿನ ಹೆಮ್ಮೆಯ ಹಿರಿಯ ರಾಜಕೀಯ ಮುತ್ಸದಿ ಎಸ್ಎಂ ಕೃಷ್ಣ ಅವರಿಂದ ಮೋದಿ ಸರ್ಕಾರವನ್ನು ಹೊಗಳಲು ಬಳಸಿಕೊಂಡಿರುವುದು ದಸರಾ ಇತಿಹಾಸದಲ್ಲಿಯೇ ಒಂದು ಕಪ್ಪುಚುಕ್ಕೆ ಆಗಿದೆ ಎಂದು ಹೆಚ್.ಎ ವೆಂಕಟೇಶ್ ಹೇಳಿದ್ದಾರೆ.

Key words: Violation -Dasara festival – protocol – SM Krishna-KPCC spokesman -H.A. Venkatesh