ಮೈಸೂರಲ್ಲಿ ವಾಲ್ಮೀಕಿ ಪುತ್ಥಳಿ ತೆರವು: ತಮ್ಮದೇ ಸಮುದಾಯದ ಆಕ್ರೋಶಕ್ಕೆ ಗುರಿಯಾದ ಮೇಯರ್ ಶಿವಕುಮಾರ್

ಮೈಸೂರು, ಅಕ್ಟೋಬರ್ 29, 2023 (www.justkannada.in): ಸಾಮಾನ್ಯವಾಗಿ ಜನಪ್ರತಿನಿಧಿಗಳು ತಮ್ಮ ಸಮುದಾಯದ ಪರವಾಗಿ ಹೆಚ್ಚು ಒಲವನ್ನು ಹೊಂದಿರುತ್ತಾರೆ. ತಮ್ಮ ಸಮುದಾಯದ ಕೆಲಸಗಳಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ. ಆದರೆ ಮೈಸೂರು ಮೇಯರ್ ಶಿವಕುಮಾರ್ ಇದಕ್ಕೆ ತದ್ವಿರುದ್ದವಾಗಿ ನಡೆದುಕೊಂಡು ತಮ್ಮದೇ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬ ಆಕ್ಷೇಪ ಕೇಳಿ ಬಂದಿತ್ತು. ನಾಯಕ ಸಮುದಾಯದ ವಾಲ್ಮೀಕಿ ಪುತ್ಥಳಿಯನ್ನು ರಾತ್ರೋರಾತ್ರಿ ತೆರವುಗೊಳಿಸಿದ ಆರೋಪಕ್ಕೆ ಮೈಸೂರು ಮೇಯರ್ ಗುರಿಯಾಗಿದ್ದರು.

ಮಿನಿ ವಿಧಾನಸೌಧದ ಬಳಿ ವಾಲ್ಮೀಕಿ ಪ್ರತಿಮೆ – ರಾತ್ರೋ ರಾತ್ರಿ ಮಾಯ

ಮೈಸೂರಿನ ತಾಲ್ಲೂಕು ಕಚೇರಿ ಮಿನಿ ವಿಧಾನಸೌಧದ ಮುಂಭಾಗದ ಉದ್ಯಾನವನದಲ್ಲಿ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಹಾಗೂ ನಾಯಕ ಸಮುದಾಯದ ಹಲವು ಮುಖಂಡರು ಸೇರಿ ವಾಲ್ಮೀಕಿ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಇಂದು ವಾಲ್ಮೀಕಿ ಜಯಂತಿ ಹಿನ್ನೆಲೆ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮ ನಿಗದಿ ಪಡಿಸಿದ್ದರು. ಆದರೆ ನೆನ್ನೆ ರಾತ್ರಿಯೇ ಉದ್ಯಾನವನದಿಂದ ಪುತ್ಥಳಿ ನಾಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯ ಸತೀಶ್ ಅವರಿಗೆ ಕೇಳಿದರೆ ನಮಗೇನು ಗೊತ್ತಿಲ್ಲ ಅಧಿಕಾರಿಗಳನ್ನು ಕೇಳಿ ಎಂದಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಮೇಯರ್ ಕಡೆ ಬೊಟ್ಟು ಮಾಡಿದ್ದಾರೆ. ಇದು ಸಹಜವಾಗಿ ವಾಲ್ಮೀಕಿ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿತ್ತು.

ವಾಲ್ಮೀಕಿ ಜಯಂತಿಗೆ ತಡೆ – ಮೇಯರ್ ವಿರುದ್ದ ಕೆಂಡಾಮಂಡಲ

ಮೇಯರ್ ಶಿವಕುಮಾರ್ ವಾಲ್ಮೀಕಿ ಪುತ್ಥಳಿ ತೆರವುಗೊಳಿಸಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ವಾಲ್ಮೀಕಿ ಸಮುದಾಯದ ಮುಖಂಡರು, ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ವಾಲ್ಮೀಕಿ ಜಯಂತಿ ನಡೆಯುತ್ತಿದ್ದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ಮೇಯರ್ ಶಿವಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟಕ್ಕೆ ಸುಮ್ಮನಾಗದೆ ಮೆರವಣಿಗೆಯನ್ನು ನಿಲ್ಲಿಸಿ ಅದರ ಮುಂದೆ ಧರಣಿ ಕುಳಿತು ಮೇಯರ್ ಹಾಗೂ ಪಾಲಿಕೆ ವಿರುದ್ದ ಘೋಷಣೆ ಕೂಗಲು ಶುರು ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಮನೆ ಮಾಡಿತ್ತು.

ಜಿಲ್ಲಾಧಿಕಾರಿ ಸಂಧಾನ ಯಶಸ್ವಿ – ನಿರ್ವಿಘ್ನವಾಗಿ ಸಾಗಿದ ಮೆರವಣಿಗೆ

ಸುಮಾರು ಒಂದು ಗಂಟೆ ಕಾಲ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಪ್ರತಿಭಟನಾನಿರತರ ಜೊತೆ ಮಾತುಕತೆ ನಡೆಸಿದರು. ಎಲ್ಲರನ್ನೂ ಸಮಾಧಾನಪಡಿಸಿದರು. ಈ ವೇಳೆ ಲೋಕೇಶ್ ಪಿಯಾ ಸೇರಿದಂತೆ ಹಲವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.