ಮೈಸೂರು ಡಿಸೆಂಬರ್,5,2025 (www.justkannada.in): ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ನಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಪರಿಶಿಷ್ಟ ಜಾತಿಯ ಜನರಿಗೆ ಭದ್ರತೆಯನ್ನು ಒದಗಿಸಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸದಸ್ಯರಾದ ವಡೆಪಲ್ಲಿ ರಾಮಚಂದರ್ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂದು ಜಿಲ್ಲಾ ಪಂಚಾಯತ್ ನ ಡಿ .ದೇವರಾಜ ಅರಸು ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನ ಮಂತ್ರಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪರಿಶಿಷ್ಟ ಜಾತಿಯ ಜನರಿಗೆ ಇರುವ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಪಾರದರ್ಶಕವಾಗಿ ತಲುಪಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿಯ ಜನರಿಗೆ ಮುದ್ರಾ ಯೋಜನೆ, ಎಂಎಸ್ ಎಂ ಇ ಯೋಜನೆ, ಶೈಕ್ಷಣಿಕ ಶಾಲಾ ಯೋಜನೆ, ಸ್ಟಾರ್ಟ್ ಆಫ್ ಯೋಜನೆ ಮುಂತಾದ ಯೋಜನೆಗಳಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯವನ್ನು ನೀಡಿ ಅವರ ಏಳಿಗೆಗೆ ಕ್ರಮ ಕೈಗೊಳ್ಳಬೇಕು. ಸಾಲ ನೀಡಲು ಅವರನ್ನು ಬ್ಯಾಂಕುಗಳು ಅಲೆದಾಡಿಸಬಾರದು ಈ ಬಗ್ಗೆ ಕ್ರಮ ವಹಿಸಬೇಕು. ಬ್ಯಾಂಕುಗಳು ಸಾಲ ನೀಡುವಲ್ಲಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರುಗಳು ಬರುತ್ತಿವೆ. ಮುಂದೆ ಇಂತಹ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ನಿರ್ದೇಶಕರಾದ ಸುನಿಲ್ ಕುಮಾರ್ ಬಾಬು ಅವರು ಮಾತನಾಡಿ, ಮಾನ್ಯ ಸದಸ್ಯರು ಪರಿಶಿಷ್ಟ ಜಾತಿಗಳ ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಸೌಲಭ್ಯಗಳನ್ನು ಕಲ್ಪಿಸುವಂತೆ ನೋಡಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಮಿತಿಯ ಸದಸ್ಯರು ನ್ಯಾಯಿಕ ಅಧಿಕಾರವನ್ನು ಹೊಂದಿರುತ್ತಾರೆ. ಜಿಲ್ಲೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಪರಿಶಿಷ್ಟ ಜಾತಿಯ ವ್ಯಕ್ತಿಯ ಕುಟುಂಬದ ಅವಲಂಬಿತರಿಗೆ ಯಾವ ಯಾವ ಸೌಲಭ್ಯವನ್ನು ನೀಡಿದ್ದೀರಿ ಎಂದು ಮಾಹಿತಿ ಪಡೆದುಕೊಂಡರು.
ಮೈಸೂರು ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಕಳೆದ ವರ್ಷ 69 ರಷ್ಟು ಫಲಿತಾಂಶ ಬಂದಿದೆ. ಇದು ಕಡಿಮೆ ಆಗಿದೆ. ಎಸ್ ಎಸ್ ಎಲ್ ಸಿ ಯಲ್ಲಿ ಎಸ್ ಸಿ ಹಾಗೂ ಎಸ್ ಟಿ ವಿಧ್ಯಾರ್ಥಿಗಳ ಉತ್ತೀರ್ಣ ಮಟ್ಟವನ್ನು ಹೆಚ್ಚಳ ಮಾಡಲು ಯಾವ ಯಾವ ಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಎಂದು ಡಿಡಿಪಿಐ ಅವರಿಂದ ಮಾಹಿತಿಯನ್ನು ಪಡೆದುಕೊಂಡರು. ಫಲಿತಾಂಶವನ್ನು ಉತ್ತಮಗೊಳಿಸಲು ವಿಶೇಷ ತರಗತಿಗಳನ್ನು ನಡೆಸಿ. ವಿದ್ಯಾರ್ಥಿಗಳಿಗೆ ವ್ಯಕ್ತಿಗತ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಕಠಿಣವಾದ ವಿಷಯಗಳನ್ನು ಸುಲಭವಾಗಿ ವಿವಿಧ ಕ್ರಮಗಳ ಮೂಲಕ ಅರ್ಥ ಮಾಡಿಸಬೇಕು ಎಂದು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.
ಕೆಲವು ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಂದ ಟ್ಯೂಷನ್ ಪೀಸ್ ಕಲೆಕ್ಟ್ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಈ ಬಗ್ಗೆ ಕ್ರಮವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಎಸ್ ಸಿ ಹಾಗೂ ಎಸ್ ಟಿ ನಿವೇಶನ ರಹಿತರ ಸರ್ವೇ ಮಾಡಲಾಗಿದ್ದು, ಇವರಿಗೆ ಹಂತ ಹಂತವಾಗಿ ನಿವೇಶನ ನೀಡಲು ಕ್ರಮ ವಹಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ನಿವೇಶನ ರಹಿತರು ಹೆಚ್ಚು ಇದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಅವರು ಮಾತನಾಡಿ ಜಿಲ್ಲೆಯಲ್ಲಿ 2011 ರ ಜನಗಣತಿಯ ಪ್ರಕಾರ 30,01,127 ಜನಸಂಖ್ಯೆ ಇದ್ದು ಇದರಲ್ಲಿ 5,36,643 ಪರಿಶಿಷ್ಟ ಜಾತಿಯ ಜನಸಂಖ್ಯೆ ಇರುತ್ತದೆ. ಜಿಲ್ಲೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಹಾಗೂ ಕೊಲೆಯಾದ ಪರಿಶಿಷ್ಟ ಜಾತಿಯ ವ್ಯಕ್ತಿಯ ಕುಟುಂಬದ ಅವಲಂಬಿತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಹಾಗೂ ಕೆಲವರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಶಿಷ್ಟ ಜಾತಿಗಳ ಮಾನಿಟರಿಂಗ್ ಕಮಿಟಿ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ಜಿಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರೀ ಮೆಟ್ರಿಕ್ 45 ಹಾಗೂ ಪೋಸ್ಟ್ ಮೆಟ್ರಿಕ್ 36 ಹಾಸ್ಟೆಲ್ ಗಳು ಇವೆ.
ಸಭೆಯಲ್ಲಿ ಎನ್ ಸಿ ಎಸ್ ಸಿ ಸೂರಜ್ ಕುಮಾರ್ ಯಾದವ್, ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ ಪಿ ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Key words: atrocities, SC, people, FIR, Vadepalli Ramachander, Mysore







