Mysore University: ಕುಲಪತಿ ನೇಮಕಕ್ಕೆ ತಡೆ; ಇತಿಹಾಸ ಪುನರಾವರ್ತನೆ !!

ಮೈಸೂರು, ಜೂನ್ 23, 2023 (www.justkannada.in): ಮೈಸೂರು ವಿವಿ ಕುಲಪತಿ ನೇಮಕ ಆದೇಶಕ್ಕೆ ಬ್ರೇಕ್ ಬಿದ್ದ ಪ್ರಕರಣ ವಿಶ್ವವಿದ್ಯಾಲಯದ ಇತಿಹಾಸದಲ್ಲಿ 2ನೇ ಬಾರಿಗೆ ಪುನರಾವರ್ತನೆಯಾಗಿದೆ!

ಹೌದು. ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕವಾಗಿದ್ದ ಪ್ರೊ.ಎನ್.ಕೆ.ಲೋಕನಾಥ್ ನೇಮಕಕ್ಕೆ ಮೊನ್ನೆಯಷ್ಟೇ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇಂತಹದ್ದೇ ಪ್ರಕರಣ 1997ರಲ್ಲಿಯೂ ನಡೆದಿತ್ತು. 

1997 ಜುಲೈನಲ್ಲಿ ಪ್ರೊ.ಜೆ.ಎನ್.ಶಶಿಧರ್ ಪ್ರಸಾದ್ ಅವರನ್ನು ಮೈಸೂರು ವಿವಿ ಕುಲಪತಿಯಾಗಿ ರಾಜ್ಯಪಾಲರು ನೇಮಕ ಮಾಡಿದ್ದರು. ಆ ವೇಳೆ ಸಿಂಡಿಕೇಟ್ ಸದಸ್ಯರಾಗಿದ್ದ ಡಾ.ಕೆ.ಮಹದೇವ ಹಾಗೂ ಎಚ್.ಎ.ವೆಂಕಟೇಶ್ ಅವರು ತಕರಾರು ತೆಗೆದಿದ್ದರು. ಕ್ರಿಮಿನಲ್ ಮೊಕದ್ದಮೆವುಳ್ಳವರ ನೇಮಕ ಪ್ರಶ್ನಿಸಿ ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದರು. ಇದಾದ ಬಳಿಕ ರಾಜ್ಯಪಾಲರು ನೇಮಕ ಆದೇಶಕ್ಕೆ ತಡೆ ನೀಡಿದ್ದರು. ನಂತರ ಪ್ರೊ.ಎಸ್.ಎನ್.ಹೆಗ್ಡೆ ಅವರನ್ನು ಮೈವಿವಿ ಕುಲಪತಿಯಾಗಿ ನೇಮಕ ಮಾಡಲಾಗಿತ್ತು.

ಆ ವೇಳೆ ಎರಡು ಅವಧಿಗೆ ಒಟ್ಟು ಆರು ವರ್ಷಗಳ ಕಾಲ ಮೈಸೂರು ವಿವಿ ಕುಲಪತಿಯಾಗಿ ಎಸ್.ಎನ್.ಹೆಗ್ಡೆ ಅವರು ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ಕುಲಪತಿಗಳ ಅಧಿಕಾರ ಅವಧಿಯನ್ನು ಮೂರು ವರ್ಷಗಳಿಂದ 4 ವರ್ಷಕ್ಕೆ ಏರಿಸಿ 2ನೇ ಅವಧಿಗೆ ಮುಂದುವರಿಯದಂತೆ ನಿಯಮ ರೂಪಿಸಲಾಗಿತ್ತು. ಪ್ರೊ.ಎಸ್.ಎನ್.ಹೆಗ್ಡೆ ನಂತರ 2003ರಲ್ಲಿ ಮತ್ತೆ ಪ್ರೊ.ಜೆ.ಎನ್.ಶಶಿಧರ್ ಪ್ರಸಾದ್ ಅವರು ಮೈವಿವಿ ಕುಲಪತಿಯಾಗಿ ನೇಮಕಗೊಂಡು ನಾಲ್ಕು ವರ್ಷ ಪೂರೈಸಿದರು. 

ಅಂದು ಗುರು, ಇಂದು ಶಿಷ್ಯ: ಕಾಕತಾಳೀಯ ಎಂಬಂತೆ ಪ್ರೊ.ಜೆ.ಎನ್.ಶಶಿಧರ್ ಪ್ರಸಾದ್ ಅವರ ನೇಮಕಕ್ಕೆ ತಡೆಬಿದ್ದಿದ್ದ ಅವಧಿಯಲ್ಲಿಯೇ ಪ್ರೊ.ಎನ್.ಕೆ.ಲೋಕನಾಥ್ ಅವರು ಭೌತಶಾಸ್ತ್ರ ವಿಷಯದಲ್ಲಿ ಅವರ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಅಂದು  ಪ್ರೊ.ಜೆ.ಎನ್.ಶಶಿಧರ್ ಪ್ರಸಾದ್ ನೇಮಕ ಆದೇಶವನ್ನು ರಾಜ್ಯಪಾಲರು ವಾಪಸ್ ಪಡೆದರೆ ಇಂದು ಪ್ರೊ.ಎನ್.ಕೆ.ಲೋಕನಾಥ್ ಅವರ ನೇಮಕಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.