ಸೇವಾ ನ್ಯೂನತೆ: ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಗೆ 4.43 ಕೋಟಿ ರೂ. ದಂಡ

ಮೈಸೂರು, ಜುಲೈ 22,2025 (www.justkannada.in):  ಸೇವಾ ನ್ಯೂನತೆ ಎಸಗಿದ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಗೆ ಮೈಸೂರು ಜಿಲ್ಲಾ ಗ್ರಾಹಕರ ಆಯೋಗ ₹4,43,92,043 ದಂಡ ವಿಧಿಸಿ ಆದೇಶ ನೀಡಿದೆ.

ಪ್ರಕರಣದ ವಿವರ..

ದೆಹಲಿಯ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಕಂಪನಿಯು ಅಧಿಕೃತವಾಗಿ ಅಂತರ ರಾಜ್ಯ ಟ್ರಾನ್ಸ್ ಮಿಷನ್ ಕಲ್ಪಿಸುವ ಪರವಾನಗಿ ಹೊಂದಿರುವ ಕಂಪನಿಯಾಗಿದ್ದು ಈ ಕಂಪನಿಯು ತನ್ನ ಪ್ರಸರಣ ಹಾಗೂ ಸ್ಥಾವರ (ಟವರ್ ಟ್ರಾನ್ಸ ಮಿಷನ್) ನಿರ್ಮಾಣ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಹೈದರಾಬಾದಿನ ಮೆ| ಬಿ.ಎಸ್.ಲಿಮಿಟೆಡ್ ಕಂಪನಿಗೆ ವಹಿಸಿತ್ತು. ಬಿ.ಎಸ್.ಲಿಮಿಟೆಡ್ ಕಂಪನಿಯು ಈ ಟ್ರಾನ್ಸ್ ಮಿಷನ್ ಮತ್ತು ಸಂಪೂರ್ಣ ಟವರ್ ಪ್ಯಾಕೇಜ್ ಸಂಬಂಧವಾಗಿ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯಿಂದ ₹ 22 ಕೋಟಿಗೆ ಇನ್ಶುರೆನ್ಸ್ ಪಾಲಿಸಿ ಪಡದಿತ್ತು.ಈ ಬಾಬ್ತು 17,05,783  ರೂ. ಪ್ರೀಮಿಯಂ ಮೊತ್ತ ಪಾವತಿಸಿತ್ತು. ಈ ಪಾಲಿಸಿಯು 15.06.2017 ರಿಂದ 14.12.2018 ರ ವರೆಗೆ ಚಾಲ್ತಿಯಲ್ಲಿತ್ತು.

ಈ ಮಧ್ಯೆ ತಾ.15.06.2017 ರಂದು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಜಲ್ನಾ ತಾಲೂಕಿನ ನಂದಾಪುರ ಮತ್ತು ಥಾರ್ ಗ್ರಾಮಗಳ ನಡುವೆ ನಿರ್ಮಿಸಿದ್ದ ಒಂದು ಟವರ್ ಲೊಕೇಶನ್ ಧ್ವಂಸವಾಗಿತ್ತು. ಹಾಗೆಯೇ ವಿಪರೀತ ಮಳೆಯಿಂದಾಗಿ ವಾಶಿಂ ಜಿಲ್ಲೆಯ ಶೆಲ್ಗಾಂವ್ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಐದು ಟವರ್ ಲೊಕೇಶನ್ ಧ್ವಂಸವಾಗಿದ್ದವು. ಇದರಿಂದಾಗಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.ಕಂಪನಿಗೆ ₹4,43,92,043 ನಷ್ಟ ಉಂಟಾಯಿತು.

ಈ ನಷ್ಟವನ್ನು ಭರಿಸಲು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯು ಸತಾಯಿಸುವ ಜೊತೆಗೆ ಸೇವಾ ನ್ಯೂನತೆ ಎಸಗಿದೆ ಎಂದು ಆಪಾದಿಸಿ ಈ ಮೊತ್ತವನ್ನು 15% ಬಡ್ಡಿಯೊಂದಿಗೆ ಕೊಡಿಸುವುದರ ಜೊತೆಗೆ 1 ಕೋಟಿ ರೂ. ಪರಿಹಾರವನ್ನೂ ಕೊಡಿಸಬೇಕೆಂದು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.ಕಂಪನಿಯು ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಯುನೈಟೆಡ್ ಇನ್ಶುರೆನ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯು ಸೇವಾ ನ್ಯೂನತೆ ಎಸಗಿದೆ ಎಂದು ತೀರ್ಪು ನೀಡಿ ಈ ಕಾರಣದಿಂದ ₹4,43,92,043  ಗಳನ್ನು ವಾರ್ಷಿಕ 6% ಬಡ್ಡಿಯೊಂದಿಗೆ 2 ತಿಂಗಳೊಳಗೆ ಪವರ್ ಗ್ರಿಡ್ ಕಾರ್ಪೊರೇಷನ್ ಲಿ.ಕಂಪನಿಗೆ ಪಾವತಿಸುವಂತೆ ಆದೇಶಿಸಿದೆ. ತಪ್ಪಿದಲ್ಲಿ 9% ಬಡ್ಡಿಯೊಂದಿಗೆ ಈ ಮೊತ್ತವನ್ನು ಪಾವತಿಸಬೇಕುವುದೆಂದು ಎಚ್ಚರಿಸಿದೆ.

ಜೊತೆಗೆ ಸೇವಾ ನ್ಯೂನತೆ ಎಸಗಿ ಮಾನಸಿಕ ಹಿಂಸೆ ನೀಡಿದ ಕಾರಣಕ್ಕಾಗಿ 1 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದೆ. ಅಲ್ಲದೆ ಪ್ರಕರಣದ ಖರ್ಚು 25 ಸಾವಿರ ರೂಪಾಯಿಯನ್ನು ಎರಡು ತಿಂಗಳೊಳಗಾಗಿ ಪಾವತಿಸುವಂತೆಯೂ ಆದೇಶಿಸಿದೆ.

ದೂರುದಾರರ ಪರವಾಗಿ ವಕೀಲರಾದ ಕೆ.ಈಶ್ವರ ಭಟ್ ವಕಾಲತ್ ವಹಿಸಿ ವಾದಿಸಿದ್ದರು.vtu

Key words: Mysore,  United India Insurance Company, fine Rs 4.43 crore