ಮೈಸೂರಿನಲ್ಲಿ ಜೆಎಸ್ಎಸ್ ಬಾನುಲಿ ಕೇಂದ್ರದ ಉದ್ಘಾಟನೆ ನೆರವೇರಿಸಿದ ಕೇಂದ್ರ ಸಚಿವ ಮುರುಗನ್

ಮೈಸೂರು, ಆಗಸ್ಟ್, 29, 2021 (www.justkannada.in): ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 106ನೇ ಜಯಂತಿ ಮತ್ತು ಜೆಎಸ್ಎಸ್ ರೇಡಿಯೋ 91.2 ಎಫ್ಎಂ ಸಮುದಾಯ ಬಾನುಲಿ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ದೊರೆತಿದೆ.

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಡಾ ಎಲ್ ಮುರುಗನ್ ಚಾಲನೆ ನೀಡಿದರು.

ಜೆಎಸ್ಎಸ್ ರೇಡಿಯೋ 91.2 ಎಫ್ ಎಂ ಸಮುದಾಯ ಬಾನುಲಿ ಕೇಂದ್ರ ಉದ್ಘಾಟಿಸಿ ಕೇಂದ್ರ ಸಚಿವ ಮುರುಗನ್ ಶುಭಸಂದೇಶ ನೀಡಿದರು. ಇದೇ ವೇಳೆ ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಶುಭ ಹಾರೈಸಿದರು.

ಶಾಸಕರಾದ ತನ್ವೀರ್ ಸೇಠ್, ಎಸ್ ಎ ರಾಮದಾಸ್, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ ಶಿವಣ್ಣ, ಮೇಯರ್ ಸುನಂದಾ ಪಾಲನೇತ್ರ, ಮೈಸೂರು‌ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್, ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಸೇರಿದಂತೆ ಮತ್ತಿತರ ಪ್ರಮುಖರು ಸಮಾರಂಭದಲ್ಲಿ ಭಾಗಿಯಾಗಿದ್ದರು.