ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್‌ ಗಳ ತೆರವಿಗೆ ಒಂದು ವಾರ ಗಡುವು ನೀಡಿದ ಬೆಸ್ಕಾಂ.

ಬೆಂಗಳೂರು,ಆಗಸ್ಟ್,23,2023(www.justkannada.in):  ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ ಸಿ ಕೇಬಲ್‌, ಡಾಟ ಕೇಬಲ್‌ ಹಾಗೂ ಡಿಶ್ ಕೇಬಲ್‌ ಗಳನ್ನು ಒಂದು ವಾರದೊಳಗೆ ತೆರವುಗೊಳಿಸಲು  ಸಂಬಂಧಿಸಿದ ಇಂಟರ್‌ ನೆಟ್‌ ಸೇವಾ ಕಂಪನಿಗಳು, ಟಿವಿ ಕೇಬಲ್‌ ಆಪರೇಟರ್‌ ಗಳಿಗೆ ಬೆಸ್ಕಾಂ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಬೆಸ್ಕಾಂ ವಿದ್ಯುತ್‌ ಕಂಬಗಳ ಮೇಲೆ ಅನಧಿಕೃತವಾಗಿ ಓಎಫ್‌ಸಿ ಕೇಬಲ್‌ ಹಾಗೂ ಇನ್ನಿತರ ಕೇಬಲ್‌ ಗಳನ್ನು ಅಳವಡಿಸಿದ್ದ ಪರಿಣಾಮ ವಿದ್ಯುತ್‌ ಕಂಬ ಉರುಳಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪಾದಚಾರಿಗಳು ಗಾಯಗೊಂಡಿದ್ದು, ಸುರಕ್ಷತೆ ದೃಷ್ಠಿಯಿಂದ ಬೆಸ್ಕಾಂ ಅನಧಿಕೃತ ಕೇಬಲ್‌ ಗಳನ್ನು ತೆರವುಗೊಳಿಸಲು ನಿರ್ಧರಿಸಿದೆ.

ಬೆಸ್ಕಾಂ ವಿದ್ಯುತ್‌ ಕಂಬಗಳಲ್ಲಿ ಹಾಕಿರುವ ಓಎಫ್‌ ಸಿ, ಇಂಟರ್‌ ನೆಟ್‌ ಡಾಟ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ಒಂದು ವಾರದೊಳಗೆ ತೆರವುಗೊಳಿಸಲು ಸಂಬಂಧಪಟ್ಟ ಇಂಟರ್‌ ನೆಟ್‌ ಕಂಪನಿಗಳು ಹಾಗೂ ಡಿಶ್‌ ಕೇಬಲ್‌ ಅಪರೇಟರ್‌ ಗಳು  ತಪ್ಪಿದ್ದಲ್ಲಿ,  ಬೆಸ್ಕಾಂ ಅವುಗಳನ್ನು ತೆರವುಗೊಳಿಸಿ, ತಪ್ಪಿತಸ್ಥರ  ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Key words: Unauthorised cables – electric poles – removed –within- week- Bescom