“ಗೆಡ್ಡೆ ಗೆಣಸುಗಳು ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು” : ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು,ಫೆಬ್ರವರಿ,06,2021(www.justkannada.in) : ಗೆಡ್ಡೆ ಗೆಣಸುಗಳು ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು. ಅನ್ನ ಸಂಸ್ಕೃತಿಯ ರಾಯಭಾರಿ. ಅದನ್ನು ಸಂರಕ್ಷಿಸದ ಹೊರತು ಭವಿಷ್ಯವಿಲ್ಲ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.jk

ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಆಶ್ರಯದಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಆರಂಭವಾದ ಮೂರು ದಿನಗಳ ಗೆಡ್ಡೆ ಗೆಣಸುಗಳ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ತಿನ್ನುವ ಆಹಾರಕ್ಕೂ, ಆರೋಗ್ಯಕ್ಕೂ ನೇರ ಸಂಬಂಧವಿದೆ

ಕೋವಿಡ್ ಜನರಲ್ಲಿ ಆತಂಕ ಮೂಡಿಸಿದೆ. ನಾವು ತಿನ್ನುವ ಆಹಾರಕ್ಕೂ, ಆರೋಗ್ಯಕ್ಕೂ ನೇರ ಸಂಬಂಧವಿದೆ. ನಿಸರ್ಗದತ್ತವಾಗಿ ಬೆಳೆಯುವ ಗೆಡ್ಡೆ ಗೆಣಸುಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ರೋಗರುಜಿನಗಳನ್ನು ಎದುರಿಸುವ ಶಕ್ತಿ ಬರುತ್ತದೆ ಎಂದರು.

ಗೆಡ್ಡೆ ಗೆಣಸು ನಮ್ಮ ಕೃಷಿ ಸಾಗುವಳಿಯ ಭಾಗವಾಗಬೇಕು

ಮನುಷ್ಯ ಕೃಷಿ ಮಾಡುವ ಮುನ್ನ ಗೆಡ್ಡೆ ಗೆಣಸು ಮನುಕುಲದ ಆಹಾರವಾಗಿದ್ದವು. ಇಂಥ ಗೆಡ್ಡೆ ಗೆಣಸು ನಮ್ಮ ಕೃಷಿ ಸಾಗುವಳಿಯ ಭಾಗವಾಗಬೇಕು. ಪ್ರಕೃತಿಯ ಕೊಡುಗೆಯಾದ ಗೆಡ್ಡೆ ಗೆಣಸು ಗ್ರಾಹಕರ ಹಿತ ಕಾಯುತ್ತವೆ ಎಂದು ಹೇಳಿದರು.

‘ಮರೆತು ಹೋದ ಆಹಾರ ಕ್ಯಾಲೆಂಡರ್’ ಬಿಡುಗಡೆ

ನವದೆಹಲಿಯ ಅಗ್ರಿಕಲ್ಚರ್ ವರ್ಲ್ಡ್ ನ ಸಂಪಾದಕಿ ಡಾ.ಲಕ್ಷ್ಮಿ ಉನ್ನಿತಾನ್ ‘ಮರೆತು ಹೋದ ಆಹಾರ ಕ್ಯಾಲೆಂಡರ್’ ಬಿಡುಗಡೆ ಮಾಡಿ ಮಾತನಾಡಿ, ಮಳೆಯ ಏರುಪೇರು ರೈತರನ್ನು ಕಂಗೆಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಆಹಾರ ಸಮಸ್ಯೆಗಳಿಗೆ ಗೆಡ್ಡೆಗಳಲ್ಲಿ ಸೂಕ್ತ ಉತ್ತರವಿದೆ ಎಂದರು.

ಸುವರ್ಣಗೆಡ್ಡೆ, ಕೆಸುವಿನ ಗೆಡ್ಡೆ, ಕಾಡುಗೆಣಸು, ಬೀನ್ಸ್ ಗೆಣಸು ಮತ್ತು ಸಿಹಿ ಗೆಣಸಿನ ವೈವಿಧ್ಯಗಳು ನಮ್ಮಲ್ಲಿವೆ. ಕೇವಲ ಮಳೆಯನ್ನು ಆಧರಿಸಿ ಈ ಬೆಳೆ ಬೆಳೆಯಬಹುದಾಗಿದೆ. ಇವುಗಳಿಂದ ತರಹೇವಾರಿ ಅಡುಗೆಗಳನ್ನು ಮಾಡಬಹುದು. ಇವುಗಳ ಸಂರಕ್ಷಣೆಯನ್ನು ರೈತರು ಮತ್ತು ಬಳಕೆಯನ್ನು ಗ್ರಾಹಕರು ಮಾಡಿ ಗಡ್ಡೆ ಗೆಣಸಿನ ವೈವಿಧ್ಯಗಳನ್ನು ಉಳಿಸಿ ಬೆಳೆಸಬೇಕಿದೆ, ಸ್ಥಳೀಯ ಗೆಣಸಿನ ವೈವಿಧ್ಯದ ದಾಖಲಾತಿ ಮಾಡಬೇಕಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇರಳದ ವಯನಾಡಿನ ಎನ್.ಎಂ.ಶಾಜಿ ಮಾತನಾಡಿ ನಾನು 120 ಬಗೆಯ ವಿವಿಧ ಜಾತಿಯ ಗೆಡ್ಡೆ ಗೆಣಸಿನ ತಳಿಗಳನ್ನು ಸಂಗ್ರಹಿಸಿ ಬೆಳೆಸುತ್ತಿದ್ದೇನೆ. ಗೆಣಸುಗಳ ತಳಿ ಹುಡುಕಿ ಅಂಡಮಾನ್ ವರೆಗೂ ಹೋಗಿ ಬಂದಿದ್ದೇನೆ. ಆಸಕ್ತರಿಗೆ ಬಿತ್ತನೆ ಗೆಡ್ಡೆಗಳನ್ನು ನೀಡುತ್ತಿದ್ದೇನೆ. ಈ ಕಾರ್ಯಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ನ ಮೈಸೂರು ಪಶ್ಚಿಮದ ಅಧ್ಯಕ್ಷ ರೊಟೇರಿಯನ್ ಡಾ.ರಾಘವೇಂದ್ರ ಪ್ರಸಾದ್ ಮಾತನಾಡಿ, ನಮ್ಮ ಪೂರ್ವಿಕರ ಆಹಾರವಾಗಿದ್ದ ಪೋಷಕಾಂಶಗಳಿಂದ ಸಮೃದ್ಧವಾದ ನೈಸರ್ಗಿಕ ಗೆಡ್ಡೆ ಗೆಣಸುಗಳನ್ನು ಮತ್ತೆ ನಮ್ಮ ಅನ್ನದ ತಟ್ಟೆಗೆ ಬರಮಾಡಿಕೊಳ್ಳಬೇಕು. ಕಾಡಿನ ಗೆಣಸುಗಳನ್ನು ನಿರಂತರವಾಗಿ ಬಳಸುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಧಾರವಾಡದ ಪ್ರಧಾನ ಸಂಶೋಧಕ ಡಾ.ಅರುಣ್ ಕುಮಾರ್ ಬಾವಿದೊಡ್ಡಿ ಭಾಗವಹಿಸಿದ್ದರು.

ಗೆಡ್ಡೆ ಗೇಣಸುಗಳ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ಮಾಡಿದ ಹೆಚ್.ಡಿ.ಕೋಟೆಯ ಎಲ್.ಸಿ.ಚನ್ನರಾಜು, ಪಿರಿಯಾಪಟ್ಟಣದ ಅಡಗೂರಿನ ಸುಪ್ರೀತ್, ಹೆಚ್.ಡಿ.ಕೋಟೆಯ ಮಜ್ಜನಕುಪ್ಪೆ ಗಿರಿಜನ ಹಾಡಿಯ ದೇವಮ್ಮ ಮತ್ತು ವಯನಾಡಿನ ಶಾಜಿಯವರನ್ನು ಸನ್ಮಾನಿಸಲಾಯಿತು.Tuber potatoes-our nature-Precious-Wealth-Dynasty-Yaduvir Krishnadatha Chamaraja odeyar 

ಕೃಷಿ ಕಲಾದ ಸೀಮಾ ಪ್ರಸಾದ್, ರೊಟೆರಿಯನ್ ದಿನೇಶ್ ಕುಮಾರ್ ಡಿ.ಕೆ, ಅಖಿಲ ಭಾರತ ಗೆಡ್ಡೆ ಗೆಣಸು ಸಮನ್ವಯ ಸಂಶೋಧನಾ ಯೋಜನೆ ಪ್ರಧಾನ ಸಂಶೋಧಕ ಇಮಾಮ್ ಸಾಹೇಬ ಜತ್ತ ಉಪಸ್ಥಿತರಿದ್ದರು.

ನಾಳೆ ಕಂದಮೂಲಗಳ ಆಹಾರ ತಯಾರಿಕಾ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

ENGLISH SUMMARY…

Tuber potatoes-our nature-Precious-Wealth-Dynasty-Yaduvir Krishnadatha Chamaraja odeyar 

key words : Tuber potatoes-our nature-Precious-Wealth-Dynasty-Yaduvir Krishnadatha Chamaraja odeyar