ಬೆಂಗಳೂರು,ಏಪ್ರಿಲ್,09,2021(www.justkannada.in) : ಸವಾಲಿನ ಸಂದರ್ಭಗಳಲ್ಲಿಯೂ ಸಹ ಸಾರಿಗೆ ಸಂಸ್ಥೆಗಳ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದ್ದು, 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯೆ ನೀಡಲು ಸಾಧ್ಯವಿರುವುದಿಲ್ಲ. ಆದ್ದರಿಂದ, ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ವಿನಂತಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಾರಿಗೆ ನೌಕರರ ಮುಷ್ಕರ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ರಾಜ್ಯದ ಒಟ್ಟು ಆದಾಯದ ಶೇ.85 ರಷ್ಟು, ವೇತನ, ಭತ್ಯೆ, ಪಿಂಚಣಿ ಮತ್ತಿತರ ಯೋಜನೇತರ ವೆಚ್ಚಗಳಿಗೆ ವ್ಯಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಲ್ಪ ಆದಾಯ ಲಭ್ಯವಿರುತ್ತದೆ. ಬಜೆಟ್ ಅಧಿವೇಶನದಲ್ಲಿ ವಿಪಕ್ಷ ನಾಯಕರು ಪ್ರಸ್ತಾಪಿಸಿದ್ದಂತೆ, ಯೋಜನೇತರ ವೆಚ್ಚ ಈಗಾಗಲೇ ಅಧಿಕವಾಗಿದೆ ಎಂದು ವಿವರಿಸಿದ್ದಾರೆ.

ಪ್ರಸಕ್ತ ಸಂದರ್ಭಗಳಲ್ಲಿ ಮತ್ತಷ್ಟು ಹೆಚ್ಚು ಅನುದಾನವನ್ನು ಯೋಜನೇತರ ವೆಚ್ಚಗಳಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ ಸಾರಿಗೆ ನೌಕರರ ಹಿತರಕ್ಷಣೆ ದೃಷ್ಟಿಯಿಂದ ಅವರಿಗೆ ವೇತನ ನೀಡಲು, ಸರ್ಕಾರ 2,300 ಕೋಟಿ ರೂ. ಗಳ ಅನುದಾನ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
key words : transportation-employees-Wage-allowance-give-Can’t-Employees-strike-Give up-duty-Attend-request-CM BSY






