ಪಿ.ಎಸ್.ಐ ನೇಮಕಾತಿಗೆ ತಡೆ: ಅಧ್ಯಯನಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ.

ಕಲಬುರಗಿ.ಫೆಬ್ರವರಿ,19,2022(www.justkannada.in):  ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಪಿ.ಎಸ್.ಐ. ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದ ಇಲ್ಲಿನ ಜನಪ್ರತಿನಿಧಗಳ ಒತ್ತಾಯದ ಮೇರೆಗೆ ಪ್ರಸ್ತುತ ನೇಮಕಾತಿಗೆ ತಡೆ ನೀಡಲಾಗಿದ್ದು, ಈ ಕುರಿತು ಅಧ್ಯಯನಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.

ಶನಿವಾರ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಅತಿಥಿಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ 371ಜೆ ವಿಶೇಷ ವಿಶೇಷ ಸ್ಥಾನಮಾನದ ಕಾಯ್ದೆ ಮತ್ತು ಆದೇಶಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಸದರಿ ಸಮಿತಿಯಲ್ಲಿ ಗೃಹ ಸಚಿವಾಲಯದ ಕಾರ್ಯದರ್ಶಿಗಳು, ಡಿ.ಪಿ.ಎ.ಆರ್. ಕಾರ್ಯದರ್ಶಿ ಹಾಗೂ ಡಿ.ಜಿ.ಪಿ ಅವರು ಸಹ ಇರಲಿದ್ದಾರೆ ಎಂದರು.

ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸ್ವಚ್ಛತೆ ಮತ್ತು ಶೌಚಾಲಯ ನಿರ್ವಹಣೆಗೆ ಗುತ್ತಿಗೆ ಅಧಾರದ ಮೇಲೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಇದೇ ಸಂದರ್ಭದಲ್ಲಿ ತಿಳಿಸಿದರು.

ಹಿಜಾಬ್ ಪ್ರಕರಣ ಕುರಿತಂತೆ ಪತ್ರಕರ್ತರ ಪ್ರಶ್ನೆಗ ಉತ್ತರಿಸಿದ ಸಚಿವ ಅರಗ ಜ್ಞಾನೇಂದ್ರ ಈ ಕುರಿತು ರಾಜ್ಯದ ಉಚ್ಛ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶವನ್ನು ಪಾಲನೆ ಮಾಡಲಾಗುತ್ತಿದೆ. ಮಕ್ಕಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಯಾರು ಮಾಡಬಾರದು. ಕೋರ್ಟ್ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆಯ ಸಂದೇಶ ನೀಡಿದರು.

ಈ ಪ್ರಕರಣದಲ್ಲಿ ಬೆರಳಣಿಕೆ ಕಡೆ ಅನಗತ್ಯ ಗೊಂದಲ ಮೂಡಿಸಲಾಗುತ್ತಿದೆ. ಕೆಲವು ದುಷ್ಟಶಕ್ತಿಗಳು, ಸಂಘನೆಗಳು ಈ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸಿದೆ. ಇಂತವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ, ಉಡುಪಿಯಲ್ಲಿ ಇದೇ ವಿಷಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಎಲ್.ಸಿ. ಶಶೀಲ ಜಿ. ನಮೋಶಿ ಇದ್ದರು.

Key words: PSI-recruitment-home minister-araga jnanendra