ಬೆಂಗಳೂರು:ಆ-16:(www.justkannada.in) ಅಡುಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ವಿಧಾನವನ್ನು ಎನ್ಎಎಲ್ ಸಂಶೋಧಕ ಆನಂದ್ ಕುಮಾರ್ ಕೆಎಸ್ ಸಂಶೋಧಿಸಿದ್ದು, ಈ ಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಯೋಜನೆ ರೂಪಿಸಿದ್ದಾರೆ.
ಬೆಂಗಳೂರಿಗರು ಕೂಡ ಈ ವಿಧಾನವನ್ನು ಅಳವಡಿಸಿಕೊಂಡಲ್ಲಿ ಬಹುಸಮಯದ ಪವರ್ ಕಟ್ ಪ್ರಾಬ್ಲಮ್ ನಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅಡಿಗೆ ತ್ಯಾಜ್ಯದಲ್ಲಿ ಅತ್ಯಂತ ಶಕ್ತಿಯ ಮೂಲವಿದೆ. ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್ಎಎಲ್) ನ ವಿದ್ಯುತ್ ವಿಭಾಗದ ಪ್ರಧಾನ ತಾಂತ್ರಿಕ ಅಧಿಕಾರಿ ಆನಂದ್ ಕುಮಾರ್ ಕೆ ಎಸ್, ಹಸಿರು ಶಕ್ತಿ ಪರಿವರ್ತನೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಈ ಮೂಲಕ ಅಡುಗೆಮನೆಯ ಆರ್ದ್ರ ತ್ಯಾಜ್ಯದಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಹುದೆಂಬುದನ್ನು ತೋರಿಸಿದ್ದಾರೆ.
ಈ ಕುರಿತು ಸ್ವತ: ಆನಂದ್ ಹೇಳುವ ಪ್ರಕಾರ, “ನಾನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಲ್ಲಿ ನನ್ನ ಸಂಶೋಧನೆಯ ಭಾಗವಾಗಿ 2015 ರಲ್ಲಿ ಯೋಜನೆಯನ್ನು ಪ್ರಾರಂಭಿಸಿದ್ದೆ. ಇದನ್ನು ಎನ್ಎಎಲ್ ಮೆಚ್ಚಿದೆ ಮತ್ತು ಸಾಧನಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಅವರು 12 ಲಕ್ಷ ರೂ. ಹಣವನ್ನು ಮಂಜೂರು ಮಾಡಿದರು. “ ಈ ಸಾಧನವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುತ್ತದೆ ಮತ್ತು ತ್ಯಾಜ್ಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿನ ತ್ಯಾಜ್ಯದಿಂದ ಶಕ್ತಿಯನ್ನು ಬಳಸಿಕೊಂಡು ಹಲವಾರು ಬೀದಿ ದೀಪಗಳನ್ನು ಸ್ಥಾಪಿಸಲು ನಾನು ಯೋಜಿಸುತ್ತಿದ್ದೇನೆ. ಪ್ರಸ್ತುತ ಸಾಧನವು ಫೋನ್ ಚಾರ್ಜ್ ಮಾಡಲು, ರಸ್ತೆ ದೀಪ ಮತ್ತು ತುರ್ತು ಬೆಳಕನ್ನು ಬೆಳಗಿಸಲು ಸಾಹಾಯವಾಗುವಂತೆ ಸಾಕಷ್ಟು ವಿದ್ಯುತ್ ಉತ್ಪಾದಿಸಬಹುದು. ಅದುಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲು 15-30 ದಿನಗಳು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಒಂದು ಸಾಧಾರಣ ಗಾತ್ರದ ಮುಚ್ಚಳ ಹೊಂದಿರುವ ಪ್ಲಾಸ್ಟಿಕ್ ಕಂಟೆನರ್ ನ್ನು ತೆಗೆದುಕೊಂಡು ಅದಕ್ಕೆ ಕೆಳಭಾಗದಲ್ಲಿ ಎರಡು ಬದಿಯಲ್ಲಿ ಎರಡು ವೃತ್ತಾಕಾರದ ರಂಧ್ರಗಳನ್ನು ಮಾಡಿ ಎಲ್ಇಡಿ ದೀಪಗಳು, ಕಾರ್ಬನ್ ಫಿಲ್ಟರ್ ಬ್ಲಾಕ್ ಮತ್ತು ಕಲಾಯಿ ವಯರ್ ಕಾಯಿಲ್ ಗಳನ್ನು ಬಳಸಿಕೊಂಡು ಸುಲಭವಾದ ಹಂತಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿಯೇ ಸಾಧನವನ್ನು ಹೊಂದಿಸಬಹುದು. ಸಣ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಗೆ 500-1000 ರೂ.ಗಳಲ್ಲಿ ಮಾಡಬಹುದಾಗಿದೆ. ದೊಡ್ಡ ಪ್ರಮಾಣದ ಅಂದರೆ ಬೀದಿ ದೀಪಗಳಿಗೆ 5000 ರೂ.ಗಿಂತಲೂ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಉತ್ಪಾದಿಸಬಹುದು ಎಂದು ವಿವರಿಸಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಅಕ್ಟೋಬರ್ ನಲ್ಲಿ ಪರಿಚಯಿಸಲಿದೆ ಎಂದು ಆನಂದ್ ತಿಳಿಸಿದ್ದಾರೆ.