ಟಿಪ್ಪು ಜಯಂತಿ ರದ್ದು ನಿರ್ಧಾರ ಮರುಪರಿಶೀಲನೆ ಮಾಡಿ-ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದ ಹೈಕೋರ್ಟ್…

ಬೆಂಗಳೂರು, ನ,6,2019(www.justkannada.in):  ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ನಿರ್ಧಾರವನ್ನ ಎರಡು ತಿಂಗಳಲ್ಲಿ ಮರುಪರಿಶೀಲನೆ ಮಾಡಿ ಎಂದು ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿ ವಿಚಾರಣೆಯನ್ನ ಮುಂದೂಡಿದೆ.

ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರದ ಆದೇಶ  ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿತ್ತು.  ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಹಿಂದಿನ ಸರ್ಕಾರ ಟಿಪ್ಪು ಜಯಂತಿ ಆಚರಣೆ ನೀಡಿತ್ತು. ಜಾತ್ಯತೀತ ಅಂಶಗಳನ್ನು ಪರಿಗಣಿಸಿ ಆಚರಣೆ ಮಾಡಲಾಗಿತ್ತು. ಸಂವಿಧಾನ ಮೌಲ್ಯಗಳನ್ನ ಎತ್ತಿ ಹಿಡಿಯುವ ಕಾರಣ ನೀಡಿ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದಿತ್ತು. ಆದರೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಒಂದೇ ದಿನದಲ್ಲಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಎರಡು ತಿಂಗಳಲ್ಲಿ ಟಿಪ್ಪು ಜಯಂತಿ ರದ್ದತಿ ಆದೇಶ ಮರುಪರಿಶೀಲಿಸಿ ಸಮರ್ಪಕ ನಿರ್ಧಾರ ತೆಗೆದುಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಜತೆಗೆ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಈ ಹಂತದಲ್ಲಿ ಯಾವುದೇ ನಿರ್ದೇಶನ ಸಾಧ್ಯವಿಲ್ಲ. ಸರ್ಕಾರವು ಸಂವಿಧಾನ ಎತ್ತಿಹಿಡಿಯುವ ಕೆಲಸ ಮಾಡಬೇಕು. ಅದು ತನ್ನ ಆದೇಶವನ್ನು ತಿದ್ದುಪಡಿ ಮಾಡಿಕೊಳ್ಳಲೂ ಅವಕಾಶವಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎರಡು ತಿಂಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿ ಹೈಕೋರ್ಟ್ ವಿಚಾರಣೆಯನ್ನ 2020 ಜನವರಿಗೆ ಮುಂದೂಡಿತು.

Key words: Tipu Jayanthi-state government-High Court- postpones- hearing