ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯ ಇಂದಿನಿಂದ ಮತ್ತೆ ಆರಂಭ

ಬೆಂಗಳೂರು, ಆಗಸ್ಟ್ 05, 2023 (www.justkannada.in): ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯ ಇಂದಿನಿಂದ ಮತ್ತೆ ಆರಂಭವಾಗಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಒಂದು ತಿಂಗಳಲ್ಲಿ ಈ ಕೆಲಸ ಪೂರ್ಣಗೊಳಿಸುವ ಗಡುವು ವಿಧಿಸಲಾಗಿದೆ ಎಂದು  ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಪಡಿತರ ಚೀಟಿ ತಿದ್ದುಪಡಿ/ ಸೇರ್ಪಡೆ/ ರದ್ದು ಬಯಸಿದ 3,18,907 ಅರ್ಜಿಗಳು ಬಾಕಿಯಿವೆ. ಹೊಸದಾಗಿ ಪರಿಷ್ಕರಣೆಗೆ ಬಯಸಿದವರಿಗೂ ಅವಕಾಶ ನೀಡಲಾಗುತ್ತದೆ.

ಆಯಾ ತಹಸೀಲ್ದಾರ್ ಕಚೇರಿಯಲ್ಲಿ ಇಲಾಖೆ ಸಿಬ್ಬಂದಿ ಬಿಡಾರ ಹೂಡಿ ಅರ್ಜಿ ಸ್ವೀಕರಿಸಿ ಇತ್ಯರ್ಥಪಡಿಸಲಿದ್ದಾರೆ. ಇನ್ನು ಪಡಿತರಚೀಟಿದಾರರಿಗೆ ಪೂರ್ವ ಮಾಹಿತಿ ನೀಡಿದ್ದರೂ ಪಡಿತರ ಚೀಟಿಗೆ ಆಧಾರ್, ಬ್ಯಾಂಕ್ ಖಾತೆ ಜೋಡಣೆ ಮಾಡದ ಕಾರಣ ಜುಲೈನ ನಗದು ಮೊತ್ತದಿಂದ ವಂಚಿತರಾಗಿದ್ದು, ಸರ್ಕಾರದ ತಪ್ಪಲ್ಲ ಎಂದು ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.