ಸೃಜನಶೀಲತೆಗೆ ಪಠ್ಯ ಶಿಕ್ಷಣ ಮಾರಕ- ಜಾನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರೇಗೌಡ

ಮೈಸೂರು,ನವೆಂಬರ್,30,2023(www.justkannada.in): ಪ್ರಸ್ತುತ ಸಂದರ್ಭದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಯುವ ಜನಾಂಗಕ್ಕೆ ಬದುಕುವ ದಾರಿ ತೋರುತ್ತಿಲ್ಲ. ನಾವಿನ್ನೂ ಪಠ್ಯ ಮಾದರಿ ಶಿಕ್ಷಣದಲ್ಲೇ ಇದ್ದೇವೆ. ಪಠ್ಯಗಳು ಮನುಷ್ಯರನ್ನು ಸೃಜನಶೀಲ  ಮಾಡುವುದಿಲ್ಲ. ಅದರಿಂದ ಹೊರಬಂದು ಹೊಸತನ ಮತ್ತು ಸಂಶೋಧನಾತ್ಮಕ ಶಿಕ್ಷಣಕ್ಕೆ ಅವಕಾಶ ನೀಡಿದಾಗ ವಾತ್ರ ಯುವ ಜನಾಂಗ ಸದೃಢವಾಗಿ ತಮ್ಮ ಬದುಕು ಕಂಡುಕೊಳ್ಳಲು ಸಾಧ್ಯ ಎಂದು ಹಿರಿಯ ಜಾನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.

ಮಹಾರಾಜ ಕಾಲೇಜಿನ ಜ್ಯೂನಿಯರ್ ಬಿಎ ಹಾಲ್‌ನಲ್ಲಿ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಪುರದೊಡ್ಡಿ, ಮಹಾರಾಜ ಕಾಲೇಜು ಜಾನಪದ ವಿಭಾಗ ಮತ್ತು ಇಫ್ರೋ ಜಾನಪದ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರೊ.ವ.ನಂ.ಶಿವರಾಮು ಅವರ ‘ಜನಪದ-ಜಾನಪದ  ಜಾನಪದ ಅಧ್ಯುಂನ ಹಾಗೂ ಕ್ಷೇತ್ರಕಾರ್ಯ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಭಾರತದಲ್ಲಷ್ಟೇ ಇನ್ನೂ ಪಠ್ಯ ಆಧಾರಿತ ಶಿಕ್ಷಣ ವ್ಯವಸ್ಥೆ ಇದೆ. ಅಮೆರಿಕದಲ್ಲಿ ಶಾಲೆಗೆ ಬಂದಾಕ್ಷಣ ವಿದ್ಯಾರ್ಥಿಗಳಿಗೆ ಕ್ಷೇತ್ರ ಕರ್ತವ್ಯಕ್ಕೆ ನಿಯೋಜನೆ ಮಾಡುವ ಮೂಲಕ ಅವರಿಗೆ ಹೊಸದನ್ನು ಕಲಿಯಲು ಪ್ರೇರಣೆ ಮತ್ತು ಪ್ರೋತ್ಸಾಹ ನೀಡುತ್ತಾರೆ. ಅಂತಹ ವ್ಯವಸ್ಥೆ ನಮ್ಮಲ್ಲೂ ಬರಬೇಕು ಎಂದರಲ್ಲದೆ, ಎಲ್ಲವೂ ಶಿಕ್ಷಕರಿಂದ ಸಿಗುತ್ತದೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು ಎಂದರು.

ಜಾನಪದಕ್ಕೆ  ಯಾವುದೇ ಜಾತಿ ಧರ್ಮ ಇಲ್ಲ. ಎಲ್ಲರನ್ನು ಒಳಗೊಳ್ಳುವುದೇ ಜಾನಪದ. ಪುರುಷರಷ್ಟೇ ಜಾನಪದ ಕಲಾವಿದರಾಗಲು ಸಾಧ್ಯ ಎಂಬ ಕಲ್ಪನೆ ಇಂದು ದೂರವಾಗಿ ಸಾಕಷ್ಟು ಮಹಿಳೆಯರು ಇಂದು ಜಾನಪದ ಕಲಾರಂಗಕ್ಕೆ ಪ್ರವೇಶಿಸಿ ಹಾಡುತ್ತಾರೆ. ನೃತ್ಯ ಮಾಡುತ್ತಾರೆ. ಇದು ನಿರಂತವಾಗಿ ನಡೆಯಬೇಕು ಎಂದರು.

ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಲ್.ಸೋಮಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ವಿ.ಷಣ್ಮುಗಂ, ಇಫ್ರೋ ಪ್ರಧಾನ ಕಾರ್ಯದರ್ಶಿ ಡಾ.ಎಂ.ಬೈರೇಗೌಡ, ಜಾನಪದ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಆರ್.ಚೇತನ, ಪ್ರಾಧ್ಯಾಪಕರಾದ ಪ್ರೊ.ವಿಜಯಲಕ್ಷಿ, ಮೈಲಹಳ್ಳಿ ರೇವಣ್ಣ ಮುಂತಾದವರು ಹಾಜರಿದ್ದರು.

Key words: Textual education – fatal – creativity – Prof. H.S. Ramachandre Gowda