Wednesday, August 12, 2026

BDA Apartments

Home Front Page ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐಗೆ: ಕಾಂಗ್ರೆಸ್’ನಲ್ಲೇ ಇಲ್ಲ ಒಮ್ಮತ, ಕೆಪಿಸಿಸಿ ಟ್ವೀಟ್ ಡಿಲೀಟ್

ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐಗೆ: ಕಾಂಗ್ರೆಸ್’ನಲ್ಲೇ ಇಲ್ಲ ಒಮ್ಮತ, ಕೆಪಿಸಿಸಿ ಟ್ವೀಟ್ ಡಿಲೀಟ್

ಬೆಂಗಳೂರು, ಆಗಸ್ಟ್ 18, 2019 (www.justkannada.in): ಬಿಎಸ್ ಯಡಿಯೂರಪ್ಪ ಭೂಗತ ಪಾತಕಿಯಂತೆ ವರ್ತಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದ ಕೆಪಿಸಿಸಿ ಕೆಲ ಗಂಟೆಗಳಲ್ಲೇ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

ರಾಜಕಾರಣಿಗಳ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಸ್ವಾಗತಿಸಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ ಕೆಪಿಸಿಸಿ ತನ್ನ ಟ್ವೀಟ್ ಡಿಲೀಟ್ ಮಾಡಿದೆ.

ಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರ ಹಿಂದೆ ಸೇಡಿನ ರಾಜಕಾರಣವಿಲ್ಲ ಎಂದು ಆಶಿಸಿರುವ ಸಿದ್ದರಾಮಯ್ಯ, ಪೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಮುಖ್ಯಮಂತ್ರಿ ನಿರ್ಧಾರ ಸ್ವಾಗತಾರ್ಹ. ಆದರೆ, ಬಿಜೆಪಿ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ ಎಂದು ನಂಬಿದ್ದೇನೆ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೂ ಮುನ್ನ ಕೆಪಿಸಿಸಿ, ತಾನು ಕಳ್ಳ, ಪರರನ್ನು ನಂಬಿ ಎಂಬಂತಿದೆ ಮುಖ್ಯಮಂತ್ರಿಗಳ ವರ್ತನೆ, ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಿ, ಹಿಂಬಾಗಿಲ ಮೂಲಕ ಸರ್ಕಾರ ರಚಿಸಿರುವ ಬಿಜೆಪಿ ಭೂಗತ ಪಾತಕಿಗಳ ರೀತಿ ವರ್ತಿಸುತ್ತಿದ್ದಾರೆ. ಮೋದಿ ಆಳ್ವಿಕೆಯಲ್ಲಿ ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿ ಕೆಲಸ ಮಾಡುತ್ತಿದೆ. ಪೋನ್ ಕದ್ದಾಲಿಕೆ ಎಂಬುದು ಒಂದು ಸುಳ್ಳು, ದ್ವೇಷ ರಾಜಕಾರಣದ ಸಂಚು ಎಂದಿದ್ದರು.