ನನ್ನ ತೆರಿಗೆ ನನ್ನ ಹಕ್ಕು ಎನ್ನುವ ಬದಲು ನನ್ನ ತೆರಿಗೆ ಕಾಂಗ್ರೆಸ್ ​ಗೆ ಅಂತ ಬದಲಿಸಿಕೊಳ್ಳಿ- ಮಾಜಿ ಸಿಎಂ ಹೆಚ್.ಡಿಕೆ ಕಿಡಿ.

ಬೆಂಗಳೂರು, ಫೆಬ್ರವರಿ,20,2024(www.justkannada.in): ಕಾಡಾನೆ ದಾಳಿಗೆ ಬಲಿಯಾಗಿದ್ದ ಕೇರಳ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದು, ನನ್ನ ತೆರಿಗೆ ನನ್ನ ಹಕ್ಕು ಎನ್ನುವ ಬದಲು ನನ್ನ ತೆರಿಗೆ ಕಾಂಗ್ರೆಸ್ ​ಗೆ ಅಂತ ಬದಲಿಸಿಕೊಳ್ಳಿ ಎಂದು ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಾಡಾನೆ ದಾಳಿಗೆ ಬಲಿಯಾಗಿದ್ದ ಕೇರಳ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಕೊಟ್ಟಿದ್ದೀರಿ, ಇಲ್ಲಿ ಆನೆ ತುಳಿತಕ್ಕೆ ಸತ್ತರೆ 5 ಲಕ್ಷ ರೂಪಾಯಿ ಕೊಡುತ್ತೀರಿ. ಆದರೆ ರೈತರು ಪರಿಹಾರ ಕೇಳಿದರೆ ಕೊಡಲ್ಲ. ನನ್ನ ತೆರಿಗೆ ನನ್ನ ಹಕ್ಕು ಅನ್ನುವ ಬದಲು ನನ್ನ ತೆರಿಗೆ ಕಾಂಗ್ರೆಸ್​ಗೆ ಅಂತ ಬದಲು ಮಾಡಿಕೊಳ್ಳಿ ಎಂದು ಹರಿಹಾಯ್ದರು.

ನಮ್ಮ ರಾಜ್ಯದ ಜನರ ಬೆವರಿನ ತೆರಿಗೆ ಹಣವನ್ನು ಪಕ್ಕದ ರಾಜ್ಯದವರಿಗೆ ಪರಿಹಾರ ಕೊಟ್ಟಿದ್ದೀರಿ. ನಮ್ಮ ರಾಜ್ಯದ ರೈತರಿಗೆ ಪರಿಹಾರ ಕೊಡಲು ನಿಮ್ಮ ಬಳಿ ಹಣ ಇಲ್ಲ. ಈ ರೀತಿ ಪರಿಹಾರ ಕೊಟ್ಟಿರುವುದು ಅತ್ಯಂತ ಖಂಡನಿಯ. ಮಾನವೀಯತೆಯಿಂದ ಪರಿಹಾರ ಕೊಟ್ಟರೆ ಪರವಾಗಿಲ್ಲ. ಅವರ ಪಕ್ಷದ ನಾಯಕರನ್ನು ಓಲೈಕೆ ಮಾಡಲು ಈ ರೀತಿ ಮಾಡುವುದು ಸರಿಯಲ್ಲ. ಈ ರೀತಿ ಮಾಡಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಯಾಕೆ ಹೋರಾಟ ಮಾಡುತ್ತೀರಾ? ಓಲೈಕೆ ರಾಜಕಾರಣ ಮಾಡಲು ಈ ರೀತಿಯಾದ ಕೆಲಸ ಮಾಡುತ್ತಿದ್ದೀರಾ? ಎಂದು ಕಿಡಿಕಾರಿದರು.

Key words: tax – right-change – Congress- former CM –HD Kumaraswamy