ವಿಶ್ವಕಪ್ ರೇಸ್ ನಿಂದ ಬಾಂಗ್ಲಾ, ಆಸಿಸ್ ಔಟ್: ಸೆಮಿಫೈನಲ್ ಗೆ ಲಗ್ಗೆ ಇಟ್ಟು ದಾಖಲೆ ಬರೆದ ಆಫ್ಘಾನಿಸ್ತಾನ

ಸೇಂಟ್ ವಿನ್ಸೆಂಟ್‌,ಜೂನ್,25,2024 (www.justkannada.in): ಇಂದು  ಸೇಂಟ್ ವಿನ್ಸೆಂಟ್‌ ನಲ್ಲಿ ನಡೆದ ಟಿ20 ವಿಶ್ವಕಪ್​​ ನ  ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನ ಮಣಿಸಿದ ಆಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಮೂಲಕ ದಾಖಲೆ ಬರೆದಿದೆ.

ಬಾಂಗ್ಲಾದೇಶದ ವಿರುದ್ಧ 9 ರನ್​ ಅಂತರದ ಗೆಲುವು ಸಾಧಿಸುವ ಮೂಲಕ ಅಫ್ಘಾನಿಸ್ತಾನ ಸೆಮಿ ಫೈನಲ್​ ಪ್ರವೇಶಿಸಿದೆ. ಇದರೊಂದಿಗೆ, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಅಫ್ಘಾನಿಸ್ತಾನ ತಂಡವು ಇದೇ ಮೊದಲ ಬಾರಿಗೆ ವಿಶ್ವಕಪ್ ಸೆಮಿ ಫೈನಲ್ ಪ್ರವೇಶಿಸಿ ದಾಖಲೆ ಬರೆದಿದೆ.

ನಾಯಕ, ಸ್ಪಿನ್ನರ್ ರಶೀದ್ ಖಾನ್ ಕೈಚಳಕ ಹಾಗೂ ವೇಗಿ ನವೀನ್ ಉಲ್ ಹಕ್ ಕರಾರುವಕ್ಕು ದಾಳಿಯಿಂದ ಬಾಂಗ್ಲಾವನ್ನ ಬಗ್ಗುಬಡಿದ ಆಫ್ಘಾನಿಸ್ತಾನ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಅಫ್ಘಾನಿಸ್ತಾನ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್​ ಗಳಿಸಿತು. ಗೆಲ್ಲಲು ಬಾಂಗ್ಲಾದೇಶಕ್ಕೆ 116 ರನ್​ಗಳ ಗುರಿ ನಿಗದಿಯಾಗಿದ್ದರೂ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಗಿ ಓವರ್​​ ಗಳನ್ನು 19ಕ್ಕೆ ಕಡಿತಗೊಳಿಸಲಾಯಿತು. ಗೆಲುವಿನ ಗುರಿ ಕೂಡ 114ಕ್ಕೆ ಪರಿಷ್ಕರಿಸಲಾಯಿತು. ಬಾಂಗ್ಲಾದೇಶ 17.5 ಓವರ್​ಗಳಲ್ಲಿ 105 ರನ್ ​​ಗಳಿಗೆ  ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಈ ಮೂಲಕ ಆಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ.

Key words: T-20 World Cup,  Afghanistan, semi-final