ದೇಶದ ಅಭಿವೃದ್ಧಿಯಲ್ಲಿ ಯುವ ಜನತೆ ಪಾತ್ರ ಅಪಾರ: ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಜನವರಿ,12,2022(www.justkannada.in):  ಒಂದು ದೇಶವು ರಾಷ್ಟ್ರೀಯ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಯುವಕರಿಂದ ಮಾತ್ರ ಸಾಧ್ಯ. ಯುವಕರು ತಮ್ಮ ಶಕ್ತಿ ಮತ್ತು ಪ್ರತಿಭೆಯಿಂದ ಸಮಾಜವನ್ನು ನಿರ್ಮಿಸುತ್ತಾರೆ. ಆದ್ದರಿಂದ ಯುವಕರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತಾಗಲಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಮಾನಸ ಗಂಗೋತ್ರಿ ತತ್ವಶಾಸ್ತ್ರ ಅಧ್ಯಯನ ವಿಭಾಗದ ಸ್ವಾಮಿ ವಿವೇಕಾನಂದ ಪೀಠದ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಕರು ದೇಶದ ಶಕ್ತಿ, ಯುವಕರು ಮಾನವಕುಲದ ಅತ್ಯುತ್ತಮ ಭರವಸೆ. ಭವಿಷ್ಯದ ಯಾವುದೇ ಗುರಿಗಳಿದ್ದರೆ, ಶಾಂತಿ ಸಾಧಿಸಬೇಕಾದರೆ ಅವರ ಭಾಗವಹಿಸುವಿಕೆ ಅತ್ಯಗತ್ಯ. ಸ್ವಾಮಿ ವಿವೇಕಾನಂದರ 159ನೇ ಜನ್ಮದಿನದಂದು ನಾವು ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತಿದ್ದು, ಅವರನ್ನು ಮತ್ತು ಅವರ ಬೋಧನೆಗಳನ್ನು ಸ್ಮರಿಸೋಣ ಎಂದು ತಿಳಿಸಿದರು.

ಶ್ರೀ ರಾಮಕೃಷ್ಣರ ಮುಖವಾಣಿಯಾಗಿ ವಿವೇಕಾನಂದರು ಎಲ್ಲ ಧರ್ಮಗಳನ್ನೂ ಗೌರವಿಸಿದರು. ಹಾಗೂ ಎಲ್ಲ ಧರ್ಮಗಳು ಸತ್ಯ ಎನ್ನುವುದನ್ನು ಜಗತ್ತಿಗೆ ತೋರಿಸಿದರು. ಭಾರತ ಆಧ್ಯಾತ್ಮಿಕ ದೇಶವೆಂದು ತಮ್ಮ ಅಮೋಘ ಭಾಷಣಗಳ ಮೂಲಕ ಪಾಶ್ಚಿಮಾತ್ಯರಿಗೆ ಮನವರಿಕೆ ಮಾಡಿಕೊಟ್ಟರು. ವಿಶ್ವ ಭೂಪಟದಲ್ಲಿ ಭಾರತೀಯರ ಹಿರಿಮೆಯನ್ನು ಎತ್ತಿ ಹಿಡಿದರು. ‘ಜನಸೇವೆಯೇ ಜನಾರ್ಧನ ಸೇವೆ’ ಎಂದು ನಂಬಿ, ದೀನ ದಲಿತರ ಏಳಿಗೆಗಾಗಿ ಬದುಕನ್ನು ಮೀಸಲಿಟ್ಟವರು. ನೊಂದವರ ಕಣ್ಣೀರನ್ನು ಒರೆಸಲೆಂದು ಭೂಮಿಗೆ ಇಳಿದು ಬಂದ ಮಹಾಚೇತನ ಅವರು ಎಂದು ಬಣ್ಣಿಸಿದರು.

ಸ್ವಾಮಿ ವಿವೇಕಾನಂದರು ಮಾನವ ಇತಿಹಾಸ ಕಂಡ ಒಂದು ಅದ್ಭುತ ಶಕ್ತಿ ವೀರ ಸನ್ಯಾಸಿ, ಅನುಷ್ಠಾನ ವೇದಾಂತಿ, ಮಹಾ ಮಾನವತಾವಾದಿ, ಸನಾತನ ಧರ್ಮದಲ್ಲಿ ಅಚಲ ನಂಬಿಕೆ ಇದ್ದರೂ ಅದರ ಜೊತೆಯಲ್ಲೇ ವೈಜ್ಞಾನಿಕ ವಿಚಾರ ಚಿಂತನೆಯುಳ್ಳ ವಿಚಾರವಾದಿ. 19ನೇ ಶತಮಾನದ ಉತ್ತರಾರ್ಧದಲ್ಲಿ ಹಿಂದೂ ಧರ್ಮವನ್ನು ಪ್ರಮುಖ ವಿಶ್ವ ಧರ್ಮದ ಸ್ಥಾನಮಾನಕ್ಕೆ ತಂದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು.

ಯುವಕರ ಅಂಜಬೇಡಿ, ಸೊಂಟಕಟ್ಟಿ ನಿಲ್ಲಿ. ಮಹಾ ಕಾರ್ಯಗಳು, ಮಹಾತ್ಯಾಗದಿಂದ ಮಾತ್ರ ಸಿದ್ಧಿಸುವುದು. ಸ್ವಾರ್ಥಬೇಡ, ಹೆಸರು ಬೇಡ, ನಿಮಗೂ ಬೇಡ, ನನಗೂ ಬೇಡ, ನಮ್ಮ ಗುರುದೇವರಿಗೂ ಬೇಡ, ಹೀನ ವಿಷಯಗಳನ್ನು ಹಿಂತಿರುಗಿ ನೋಡಬೇಡಿ. ಏಳಿ, ಎದ್ದೇಳಿ, ದೀರ್ಘ ನಿದ್ರೆಯಿಂದ, ಉತ್ಸಾಹಿಗಳಾಗಿ ಎಂಬ ಸಂದೇಶ ಸಾರಿದ್ದರು ಎಂದು ಹೇಳಿದರು.

ಇದೇ ವೇಳೆ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮಹಿಪಾಲಾನಂದಜೀ ಮಹಾರಾಜ್ ಅವರು “ಯುವಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ” ಎಂಬ ವಿಷಯದ ಕುರಿತು ಸಂದೇಶ ಸಾರಿದರು. ತತ್ತ್ವಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಎಂ. ಡಾನಿಯಲ್ ಸೇರಿದಂತೆ ಇತರರು ಹಾಜರಿದ್ದರು.

Key words: Swami Vivekananda jayanthi-mysore university-  Prof. G. Hemanth Kumar