ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಸುಪ್ರೀಂ ಮಾರ್ಗಸೂಚಿ..! ಆರು ತಿಂಗಳಲ್ಲಿ ಜಾರಿಗೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಗಳಿಗೆ ಆದೇಶ…

ಬೆಂಗಳೂರು,ಮೇ,11,2021(www.justkannada.in): ಕ್ರಿಮಿನಲ್ ಅಪರಾಧ ವ್ಯವಸ್ಥೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಆರು ತಿಂಗಳಲ್ಲಿ ಜಾರಿಗೊಳಿಸುವಂತೆ ಎಲ್ಲ ಹೈಕೋರ್ಟ್ ಗಳಿಗೆ ಆದೇಶಿಸಿದೆ.jk

ಸದ್ಯದ ಅಪರಾಧ ಪ್ರಕರಣಗಳ ನ್ಯಾಯದಾನ ವ್ಯವಸ್ಥೆಯಲ್ಲಿನ ನೂನ್ಯತೆಗಳನ್ನು ಸರಿಪಡಿಸುವ ಹೊಸ ಮಾರ್ಗಸೂಚಿಯ ಜಾರಿಗೆ ಎಲ್ಲ ಹೈಕೋರ್ಟ್ ಗಳು,  ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಾಯಪಡೆದುಕೊಳ್ಳಬೇಕು ಮತ್ತು ಅವುಗಳ ಸಮನ್ವಯದಿಂದ ಪೊಲೀಸ್ ಕಾಯಿದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಮಾರ್ಗಸೂಚಿಯಲ್ಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಆದಷ್ಟು ಶೀಘ್ರ ಜಾರಿಗೆ ಕ್ರಮ ವಹಿಸಬೇಕೆಂದು ಸುಪ್ರೀಂ ನಿರ್ದೇಶನ ನೀಡಿದೆ.

ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಳಲ್ಲಿ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಸ್ವಯಂ ದಾಖಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಿಂದಿನ ಸಿಜೆಐ ಎಸ್.ಎ ಬೋಬ್ಡೆ, ಎಲ್.ನಾಗೇಶ್ವರ ರಾವ್ ಮತ್ತು ಎಸ್. ರವೀಂದ್ರ ಭಟ್ ಅವರಿದ್ದ ತ್ರಿಸದಸ್ಯಪೀಠ ಈ ಮಹತ್ವದ ಆದೇಶ ಮಾಡಿದೆ.

ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕಾರ ನೀಡಲು ಸುಪ್ರೀಂಕೋರ್ಟ್ ನ ಹೆಸರಾಂತ ವಕೀಲರಾದ ಆರ್. ಬಸಂತ್, ಸಿಧಾಯ್ ಲೂತ್ರಾ ಮತ್ತು ಕೆ.ಪರಮೇಶ್ವರ್ ಅವರನ್ನು ಅಮಿಕಸ್ ಕ್ಯೂರಿಗಳನ್ನಾಗಿ ನೇಮಕ ಮಾಡಿತ್ತು. ಕೋರ್ಟ್ ನಿರ್ದೇಶನದ ಮೇರೆಗೆ ಅವರು ಸಾಕಷ್ಟು ಅಧ್ಯಯನ ನಡೆಸಿ ತಮ್ಮ ಅನುಭವ ಧಾರೆ ಎರೆದು ಮಾರ್ಗಸೂಚಿ ಸಿದ್ಧಪಡಿಸಿದ್ದರು. ಆ ಬಗ್ಗೆ ಸುಪ್ರೀಂಕೋರ್ಟ್, ಹೈಕೋರ್ಟ್ ಗಳ ಅಭಿಪ್ರಾಯಗಳನ್ನೂ ಪಡೆದ ನಂತರ ಮಾರ್ಗಸೂಚಿ ಅಂತಿಮಗೊಳಿಸಿದೆ.supreme-court-guidelines-quick-disposal-criminal-cases

ಸಿಜೆಐ ಆಗಿದ್ದ ಬೊಬ್ಡೆ ಅವರು ನಿವೃತ್ತಿಗೂ ಮುನ್ನ ಈ ಮಹತ್ವದ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಆದೇಶಿಸಿದ್ದಾರೆ.  ಅವುಗಳ ಪ್ರಮುಖಾಂಶಗಳು ಹೀಗಿವೆ.

  • ಪ್ರತಿಯೊಂದು ಮರಣೋತ್ತರ ಪರೀಕ್ಷೆ ಮತ್ತು ಇನ್ ಕ್ವೆಸ್ಟ್ ವರದಿಯ ಜೊತೆಗೆ ಬಾಡಿಸ್ಕೆಚ್ ಕೂಡ ಲಗತ್ತಿಸಿರಬೇಕು.
  • ಪೊಲೀಸರ ವಶದಲ್ಲಿದ್ದಾಗ ಸಾವನ್ನಪ್ಪಿದ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ಮಾಡಬೇಕು.
  • ಆ ವಿಡಿಯೋವನ್ನು ಪಂಚನಾಮ ಅಥವಾ ಸೀಜರ್ ಮೆಮೋದಲ್ಲಿ ದಾಖಲಿಸಬೇಕು, ಅದನ್ನು ವಿಚಾರಣೆ ವೇಳೆ ಸಾಕ್ಷ್ಯ ಕಾಯಿದೆ ಸೆಕ್ಷನ್ 65ಬಿ ಅಡಿ ಲಗತ್ತಿಸಬೇಕು.
  • ಅಪರಾಧ ದಂಡಸಂಹಿತೆ ಸೆಕ್ಷನ್ 161 ಮತ್ತು 164ರ ಅಡಿ ಪ್ರತಿ ಆರೋಪಿಯ ಹೇಳಿಕೆಯನ್ನು ದಾಖಲಿಸಿ, ಅದರ ಪ್ರತಿಯನ್ನು ಆತನಿಗೆ ಪೂರೈಕೆ ಮಾಡಬೇಕು, ಜೊತೆಗೆ ತನಿಖೆಯ ವೇಳೆ ವಶಪಡಿಸಿಕೊಂಡಿರುವ ದಾಖಲೆಗಳು,ವಸ್ತುಗಳು ಮತ್ತು ಸಾಕ್ಷ್ಯಗಳ ವಿವರ ನೀಡಬೇಕು.
  • ಅಪರಾಧ ದಂಡಸಂಹಿತೆಯ ಪ್ರಕಾರ ಆರೋಪಗಳನ್ನು ನಿಗದಿಪಡಿಸುವಾಗ ಪರಿಚ್ಛೇದ 2ರಲ್ಲಿರುವಂತೆ ನಮೂನೆ 32 ಅನ್ನು ನ್ಯಾಯಾಧೀಶರೇ ಖುದ್ದು ಸಿದ್ಧಪಡಿಸಬೇಕು.
  • ಸಾಕ್ಷ್ಯಗಳ ಹೇಳಿಕೆಗಳನ್ನು ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್ ಎರಡರಲ್ಲೂ ದಾಖಲಿಸಬೇಕು ಮತ್ತು ಆರೋಪಿಗೆ ಆ ಹೇಳಿಕೆಗಳ ಪ್ರತಿಯನ್ನು ಉಚಿತವಾಗಿ ನೀಡಬೇಕು.
  • ಸಾಕ್ಷ್ಯಗಳನ್ನು ದಾಖಲಿಸುವಾಗ ನ್ಯಾಯಾಲಯಗಳು ಪ್ರತ್ಯೇಕ ಪ್ಯಾರಾಗಳಲ್ಲಿ ಪ್ರಾಸಿಕ್ಯೂಷನ್ ಸಾಕ್ಷ್ಯ ಮತ್ತು ಡಿಫೆನ್ಸ್ ಸಾಕ್ಷ್ಯ ಹಾಗೂ ಕೋರ್ಟ್ ಸಾಕ್ಷ್ಯ ಇವುಗಳನ್ನು ದಾಖಲಿಸಬೇಕು.
  • ಸಾಕ್ಷ್ಯಗಳು ಮತ್ತು ವಸ್ತುಗಳ ಸಲ್ಲಿಕೆ: ನ್ಯಾಯಾಲಯಕ್ಕೆ ಸಾಕ್ಷ್ಯಗಳು ಹಾಗೂ ವಸ್ತುಗಳನ್ನು ಸಲ್ಲಿಸಿದಾಗ ಅವುಗಳಿಗೆ ಪ್ರತ್ಯೇಕ ಸಂಖ್ಯೆಗಳನ್ನು ನೀಡಿ ಸುಲಭವಾಗಿ ಅವುಗಳನ್ನು ಗುರುತಿಸುವಂತಾಗಿರಬೇಕು.
  • ಭಾರತೀಯ ಸಾಕ್ಷ್ಯ ಕಾಯಿದೆ 1872 ಸೆಕ್ಷನ್ 8 ಅಥವಾ 27ರ ಪ್ರಕಾರ ನ್ಯಾಯಾಂಗ ಅಧಿಕಾರಿ ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸಬೇಕಾಗುತ್ತದೆ.
  • ತೀರ್ಪು ನೀಡುವಾಗ ಅತ್ಯಂತ ವಿವರವಾಗಿ ಎಲ್ಲಾ ಅಂಶಗಳನ್ನು ದಾಖಲಿಸಬೇಕು.
  • ರಾಜ್ಯ ಸರಕಾರಗಳು ಸರಕಾರಿ ಅಭಿಯೋಜಕರಲ್ಲದೆ ತನಿಖಾಧಿಕಾರಿಗಳಿಗೆ ತನಿಖೆಯ ವೇಳೆ ನೆರವಾಗಲು ಪ್ರತ್ಯೇಕ ವಕೀಲರನ್ನು ನಿಯೋಜಿಸಬೇಕು.
  • ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಪ್ರತಿ ದಿನ ವಿಚಾರಣೆ ನಡೆಸಿ ಪೂರ್ಣಗೊಳಿಸಬೇಕು. ಅಗತ್ಯ ಕಾರಣಗಳಿಲ್ಲದೆ ವಿಚಾರಣೆ ಮುಂದೂಡಬಾರದು.

ಜಾಮೀನು ಅರ್ಜಿ ತ್ವರಿತ ವಿಲೇವಾರಿ

ಸುಪ್ರೀಂಕೋರ್ಟ್ ಸೂಚಿಸಿರುವ ಮಾರ್ಗಸೂಚಿಯಲ್ಲಿ ಜಾಮೀನಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಅದರಂತೆ ಜಾಮೀನು ಅರ್ಜಿ ಮೊದಲು ವಿಚಾರಣೆಗೆ ಬಂದ ದಿನಾಂಕದಿಂದ 3 ರಿಂದ 7 ದಿನಗಳ ಅವಧಿಯಲ್ಲಿ ಅದನ್ನು ಇತ್ಯರ್ಥಗೊಳಿಸಬೇಕು. ಒಂದು ವೇಳೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅದನ್ನು ಆ ಅವಧಿಯಲ್ಲಿ ವಿಲೇವಾರಿ ಮಾಡದಿದ್ದರೆ ಅದಕ್ಕೆ ಕಾರಣಗಳನ್ನು ನೀಡಬೇಕು.

 

ಕೃಪೆ..

ಶ್ರೀಕಾಂತ್ ಹುಣಸವಾಡಿ

ವಿಜಯ ಕರ್ನಾಟಕ..

Key words: Supreme court- Guidelines – Quick Disposal -Criminal Cases