ಅಧ್ಯಯನ, ಸ್ಪಷ್ಟಗುರಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ- ವೆಂಕಟೇಶ್ ಶಲವಡಿ ಅಭಿಪ್ರಾಯ

ಮೈಸೂರು,ಸೆಪ್ಟಂಬರ್,5,2020(www.justkannada.in): ಆಸಕ್ತಿಯ ಅಧ್ಯಯನದ ಜತೆಗೆ ಸ್ಪಷ್ಟ ಗುರಿಯೊಂದಿಗೆ ಬ್ಯಾಂಕಿಂಗ್ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾದ  ಕಲಿಕಾ ಮತ್ತು ವಿಕಾಸ ಸಂಸ್ಥೆಯ ನಿರ್ದೇಶಕ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್ ಶಲವಡಿ ಅಭಿಪ್ರಾಯಪಟ್ಟರು.success-definitely-studying-banking-exams-ksou-venkatesh-shalavadi

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆಯೋಜಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ಆನ್ಲೈನ್ ತರಬೇತಿ ಶಿಬಿರವನ್ನು ಆನ್ಲೈನ್  ನಲ್ಲೆ ಉದ್ಘಾಟಿಸಿ ಮಾತನಾಡಿದ ಕಲಿಕಾ ಮತ್ತು ವಿಕಾಸ ಸಂಸ್ಥೆಯ ನಿರ್ದೇಶಕ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್ ಶಲವಡಿ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಮ್ಮೆ ಕಾಲಿಟ್ಟರೆ ಸಾಕಷ್ಟು ಅವಕಾಶಗಳು ಸಿಗುತ್ತಾ ಹೋಗುತ್ತವೆ.  ಐ.ಟಿ, ಬಿ.ಟಿ ಸಂಸ್ಥೆಗಳಲ್ಲಿ ನೀಡುವ ಸಂಬಳಕ್ಕಿಂತ ಹೆಚ್ಚಿನ ವೇತನ ಇಲ್ಲಿ ಲಭಿಸಲಿದೆ. ಬ್ಯಾಂಕಿಂಗ್ ಕ್ಷೇತ್ರದತ್ತ ಬರುವಂಥವರು ಸ್ಪಷ್ಟವಾದ ಗುರಿ ಜತೆಗೆ ವಿಶೇಷ ಆಸಕ್ತಿ ಹೊಂದಿರಲೇಬೇಕಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಶೇ 100ರಷ್ಟು ಸುರಕ್ಷಿತ ಉದ್ಯೋಗವಿದು. ಚೆನ್ನಾಗಿ ಕೆಲಸ ಮಾಡಿದರೆ ಉನ್ನತ ಸ್ಥಾನಕ್ಕೂ ಹೋಗಬಹುದು ಎಂದು ಹೇಳಿದರು.

ಈಗ ಎಲ್ಲಾ ಹುದ್ದೆಗಳ ಆಯ್ಕೆಗೆ ಪರೀಕ್ಷೆ ಇರುವುದರಿಂದ ನಿರಂತರವಾಗಿ ಅಧ್ಯಯನ ಮಾಡುತ್ತಲೇ ಇರಬೇಕಾಗುತ್ತದೆ. ಹೆಚ್ಚೆಚ್ಚು ಪರೀಕ್ಷೆಗಳನ್ನು ಎದುರಿಸುವುದರಿಂದ ಹೆಚ್ಚೆಚ್ಚು ಅನುಭವ ಸಿಗಲಿದೆ. ಜತೆಗೆ ಜ್ಞಾನದ ಲಭ್ಯತೆಯೂ ಆಗಲಿದೆ. ಹಾಗಾಗಿ ವಿವಿಧ ಬ್ಯಾಂಕ್ ಗಳಲ್ಲಿ ಒಂದಲ್ಲಾ ಒಂದು ಕಡೆ ಅವಕಾಶ ಸಿಕ್ಕೇ ಸಿಗುತ್ತದೆ. ಮುಖ್ಯವಾಗಿ ಅಭ್ಯರ್ಥಿಗಳು ಸತತ ಅಧ್ಯಯನ ಹಾಗೂ ಪ್ರಯತ್ನ ಮಾಡಬೇಕಾಗುತ್ತದೆ. ಸಾಧ್ಯವಾದಷ್ಟು ಪರೀಕ್ಷೆಗಳನ್ನು ನೀವು ಎದುರಿಸಿ. ಬ್ಯಾಂಕ್ ಪರೀಕ್ಷೆ ತೆಗೆದುಕೊಳ್ಳಲು ಆಂಗ್ಲ ಭಾಷೆಯ ಜ್ಞಾನದ ಜೊತೆಗೆ ಸಂವಹನ ಭಾಷೆಯ ಪಾಂಡಿತ್ಯವು ಇರಲೇ ಬೇಕು ಅದಕ್ಕಾಗಿ ಕನ್ನಡ ದಿನ ಪತ್ರಿಕೆಗಳ ಜೊತೆಗೆ ಇಂಗ್ಲಿಷ್ ದಿನ ಪತ್ರಿಕೆಗಳನ್ನು ಓದಿ ಮನನ ಮಾಡಿಕೊಳ್ಳಬೇಕು  ಎಂದು ಸಲಹೆ ನೀಡಿದರು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಪ್ರಾದೇಶಿಕ ಭಾಷೆ ಕಲಿಯಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸೇವೆ ಸಲ್ಲಿಸುವವರು ದ್ವಿಭಾಷೆ ಕಲಿತಿರಬೇಕು. ಕ್ಲರಿಕಲ್ ಹುದ್ದೆಯಿಂದ ಹಿಡಿದು ಪ್ರೊಬೇಷನರಿ, ಸ್ಕೇಲ್-1 ರಿಂದ 7 ಅಧಿಕಾರಿಗಳಾಗಿ ಬಡ್ತಿ ಹೊಂದಬಹುದು. ಹಾಗಾಗಿ ಐಬಿಪಿಎಸ್ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಪರಿಶ್ರಮ, ಸತತ ಅಭ್ಯಾಸದಿಂದ ಉತ್ತಮ ಅಂಕ ಗಳಿಸಬೇಕು. ಯಾವುದೇ ಅಡ್ಡದಾರಿಗಳಿಂದ ಉದ್ಯೋಗ ಗಳಿಸಲು ಸಾಧ್ಯವಿಲ್ಲ. ಕಠಿಣ ಪರಿಶ್ರಮದ ಅಧ್ಯಯನದಿಂದ ಯಶಸ್ಸು ಸಾಧ್ಯ ಎಂಬ  ಸತ್ಯವನ್ನು ಅಭ್ಯರ್ಥಿಗಳು ಅರಿಯಬೇಕು ಎಂದು ವೆಂಕಟೇಶ್ ಶಲವಡಿ ಕಿವಿಮಾತು ಹೇಳಿದರು.

ಪಠ್ಯಕ್ಕೆ ಮೀರಿದ ಜ್ಞಾನವನ್ನು ನಾವು ಬೆಳೆಸಿಕೊಂಡರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಸಾಧ್ಯ….

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್ ಅಧಿಕಾರಿ ಹೆಚ್.ಬಾಲಕೃಷ್ಣ,  ನಮ್ಮ ದೇಶದಲ್ಲಿ ಅಸಂಘಟಿತ ಮೈಕ್ರೊ ಬ್ಯಾಂಕಿಂಗ್ ವ್ಯವಸ್ಥೆ ವಿಶಾಲವಾಗಿ ಹಬ್ಬಿದ್ದು, ಸಣ್ಣ ಪ್ರಮಾಣದ ಸಾಲ ಸೌಲಭ್ಯಗಳ ಮೂಲಕ ಜನರಲ್ಲಿ ಹಣ ಉಳಿತಾಯ ಮಾಡುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲೂ ಸ್ತ್ರೀಶಕ್ತಿ ಮಹಿಳಾ ಸಹಕಾರ ಸಂಘಗಳಿರುವುದು ಇದಕ್ಕೆ ಉದಾಹರಣೆ. ಈ ಬಗ್ಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೋಗುವವರು ತಿಳಿದುಕೊಂಡಿರಬೇಕು ಎಂದು ಹೇಳಿದರು.success-definitely-studying-banking-exams-ksou-venkatesh-shalavadi

ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಬೇರೆ ಆಲೋಚನೆಗಳನ್ನು ಬಿಟ್ಟು ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲವಾದರೆ ನಿಮ್ಮೆಲ್ಲಾ ಶ್ರಮ ಮತ್ತು ಪ್ರಯತ್ನ ವ್ಯರ್ಥವಾಗುತ್ತದೆ. ಪಠ್ಯಕ್ಕೆ ಮೀರಿದ ಜ್ಞಾನವನ್ನು ನಾವು ಬೆಳೆಸಿಕೊಂಡರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಸಾಧ್ಯ ಎಂದು ತಿಳಿಸಿದರು.

ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರಾರ್ಥಿಗಳಿಗೆ ಶುಭಹಾರೈಸಿ ಮಾತನಾಡಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಮೈಸೂರು-ಮಡಿಕೇರಿ ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಎ. ದೇವರಾಜು,  ಕಠಿಣ ಪರಿಶ್ರಮ, ಸತತ ಪ್ರಯತ್ನದಿಂದ ಮಾತ್ರ ಜಯ ಸಿಗುತ್ತದೆ ಎಂಬ ಅಂಶವನ್ನು ಅರಿತುಕೊಳ್ಳಬೇಕು. 1990ರ ಈಚೆಗೆ ಉತ್ತರ ಭಾರತೀಯರು ದಕ್ಷಿಣ ಭಾರತದ ಕಡೆಗೆ ಉದ್ಯೋಗಕ್ಕಾಗಿ ಹೆಚ್ಚು ವಲಸೆ ಬರುತ್ತಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಸ್ಪರ್ಧೆಗಳು ಹೆಚ್ಚಾಗುತ್ತಿವೆ. ಜೊತೆಗೆ ಐಎಎಸ್, ಐಪಿಎಸ್, ಐಎಫ್ಎಸ್ ಕೆಎಎಸ್ ಮುಂತಾದ ಪರೀಕ್ಷೆಗಳನ್ನು ಎದುರಿಸಲು ಬ್ಯಾಂಕಿಂಗ್ ಹುದ್ದೆಗಳ ಪರೀಕ್ಷಾ ಅಧ್ಯಯನ ಸಂದರ್ಭದಲ್ಲಿಯೇ ಸಿದ್ದತೆ ಮಾಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ಸ್ಮಾರ್ಟ್ ಸಿಟಿಯ ಎಂ.ಡಿ. ಮತ್ತು ಸಿಇಒ ಆಶಾದ್ ಆರ್. ಷರೀಫ್ ಮಾತನಾಡಿ ಪ್ರಸ್ತುತ ಬ್ಯಾಂಕ್ ಗಳ ನೇಮಕಾತಿಗಳಲ್ಲಿ ಕನ್ನಡಿಗರು ಅತಿ ಹೆಚ್ಚು ಆಯ್ಕೆಯಾಗಲು ಅಭ್ಯರ್ಥಿಗಳು ಶ್ರಮವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರಾಮುವಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್,  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಗ್ರಾಹಕರಿಗೆ ಉತ್ತಮ ಸೇವೆಗಳು ಲಭಿಸುತ್ತಿವೆ. ಜನಸಾಮಾನ್ಯರ ಅನುಕೂಲಕ್ಕಾಗಿ ಬ್ಯಾಂಕುಗಳು ದುಡಿಯುತ್ತಿವೆ, ದೇಶದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದಲ್ಲಿ ಅನ್ಯಾಯವಾಗುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಈಚಿನ ದಿನಗಳಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಗುರ್ತಿಸಿಕೊಂಡಿದ್ದಾಳೆ. ಇದು ಉತ್ತಮ ಬೆಳವಣಿಗೆ. ಮಹಿಳೆಯರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉದ್ಯೋಗ ಗಿಟ್ಟಿಸಬೇಕು ಎಂದು ಕರೆ ನೀಡಿದರು.

ಕುಲಸಚಿವ ಪ್ರೊ. ಲಿಂಗರಾಜಗಾಂಧಿ ಮಾತನಾಡಿ,  ಇಡೀ ದೇಶದಲ್ಲಿಯೇ ಅತಿ ಹೆಚ್ಚು ಬ್ಯಾಂಕುಗಳನ್ನು ನೀಡಿದ ಕೀರ್ತಿ ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲಬೇಕು. ದುರಾದೃಷ್ಟಾವಶಾತ್ ನಮ್ಮ ರಾಜ್ಯದಿಂದ ಅತಿ ಕಡಿಮೆ ಜನ ಐಬಿಪಿಎಸ್ ಪರೀಕ್ಷೆ ಪಾಸು ಮಾಡುತ್ತಾರೆ. ಇದಕ್ಕೆ ಅಪವಾದವಾಗಿ ಎಲ್ಲಾ ಅಭ್ಯರ್ಥಿಗಳು ಸೂಕ್ತ ಸಿದ್ಧತೆಯೊಂದಿಗೆ ಪರೀಕ್ಷೆ ಎದುರಿಸಿ ಉದ್ಯೋಗ ಪಡೆಯುವಂತಾಗಲಿ ಎಂದು ಹಾರೈಸಿದರು. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Key words: Success -definitely – studying- banking- exams –KSOU-Venkatesh Shalavadi.